ಚಳಿಗಾಲದ ಒಂದು ರಾತ್ರಿ


ಬಾತ್ ರೂಮ್ ನಲ್ಲಾದ ಸದ್ದಿಗೆ ಎಚ್ಚರವಾಗಿ ಡಿಸೆಂಬರ್ ನ ಕೊರೆಯುವ ಮಧ್ಯರಾತ್ರಿಯ ಚಳಿಯಲ್ಲಿ ಏನು ಸದ್ದು ಎಂದು ನೋಡಲು ತನ್ನ ಮಲಗುವ ಕೋಣೆಯಿಂದ ಹೊರಬಂದನು. ಒಂಟಿಯಾಗಿದ್ದ ಆತ ರಾತ್ರಿಮಲಾಗುವ ಮುನ್ನ ನೋಡಿದ ಕಂಜೂರಿಂಗ್ ಇಂಗ್ಲಿಷ್ ಸಿನೆಮಾದ ಭಯಾನಕ ದೃಶ್ಯಗಳೇ ಅವನ ತಲೆಯಲ್ಲಿ ಗುಯ್ ಗುಡುತಿತ್ತು. ಬಾತ್ ರೂಮ್ ನ ಚಿಲಕ ಹೊರಗಡೆಯಿಂದ ಭಧ್ರವಾಗಿ ಹಾಕಿತ್ತು. ಲೈಟ್ ಹಾಕಿ ಬಾಗಿಲು ತೆರೆದು ನೋಡಿದಾಗ ಸ್ಟೂಲ್ ಮೇಲೆ ಇಟ್ಟಿದ್ದ ತುಂಬಿದ ನೀರಿನ ಬಕೆಟ್ ಅಡ್ಡಬಿದ್ದಿತ್ತು. ಸಿನೆಮಾದ ಮೂಡ್ ನಲ್ಲಿ ಏನನ್ನೋ ಯೋಚನೆ ಮಾಡುತ್ತಾ ಬಾಗಿಲು ತೆರೆದಿದ್ದ ಅವನು “ಇಷ್ಟೇನಾ” ಅಂತ ತನ್ನನ ತಾನು ಸಮಾಧಾನ ಮಾಡಿಕೊಂಡು ಮತ್ತೆ ಬಾತ್ ರೂಮ್ ಬಾಗಿಲ ಚಿಲಕ ಬಿಗಿಗೊಳಿಸಿ ಲೈಟ್ ಆಫ್ ಮಾಡಿ ತನ್ನ ಮಲಗುವ ಕೋಣೆ ಕಡೆಗೆ ಹೊರಟ, ಎರಡೇ ಹೆಜ್ಜೆ ಮುಂದೆ ಬಂದಿದ್ದ ಮತ್ತೆ ಸದ್ದು. ಈ ಬಾರಿ ಆಫ್ ಮಾಡಿದ್ದ ಲೈಟ್ ಆನ್ ಆಗಿತ್ತು. ಹಾಕಿದ ಚಿಲಕ ಹಾಗೆ ಇತ್ತು. ಒಳಗೆ ಶವರ್ ಬಾತ್ ನ ನೀರಲ್ಲಿ ಯಾರೋ ಸ್ನಾನಮಾಡುತ್ತಿರುವ ಸದ್ದು. ಹೊರಗಿದ್ದ ಇವನು ಆ ಚಳಿಯಲ್ಲೂ ಒದ್ದೆಯಾಗಿದ್ದ..........

#ಸಣ್ಣಕಥೆ

ದೀಪದಿಂದ ದೀಪವ ಹಚ್ಚ ಬೇಕು ಮಾನವ….



ಅವತ್ತು ಶನಿವಾರ, ನಾನು ಧನಂಜಯಣ್ಣ ಮಾಮೂಲಿಗಿಂತ ಸ್ವಲ್ಪ ಮುಂಚೆನೆ ಆಫೀಸ್ ನಿಂದ ಹೊರಟ್ವಿ, ವಾರಾಂತ್ಯ ಅನ್ನೊ ಖುಷಿಯ ಜೊತೆ, ಇನ್ನು ಸೋಮವಾರದಿಂದ ಮೂರು ದಿವಸ ದೀಪಾವಳಿ ರಜ ಅನ್ನೊ ಹುಮ್ಮಸ್ಸು. ತಿಂಗಳ ಹಿಂದೆನೆ ಬಸ್ ಟಿಕೆಟ್ ಬುಕ್ ಮಾಡೊಕೆ ಮರೆತು ಹೋದ ನನಗೆ ಈ ಬಾರಿ ಭಾನುವಾರ ಸೇರಿ ಸಾಲು ಸಾಲು ರಜೆ ಇದ್ರು ಕೂಡ ಮೂರು ದಿವಸದ ದೀಪಾವಳಿನಲ್ಲಿ ಊರಿಗೆ ಹೋಗಿ ಆಚರಿಸೋಕೆ ನನಗೆ ಸಿಗೋದು ಎರಡು ದಿವಸ ಮಾತ್ರ. ಯಾಕಂದ್ರೆ ನಂಗೆ ಟಿಕೆಟ್ ಸಿಕ್ಕಿದ್ದೆ ಸೋಮವಾರ ರಾತ್ರಿ ಬಸ್ ಗೆ. ಹೀಗೆ ಸಂತೋಷ ಬೇಸರದಿಂದ ಸಮ್ಮಿಳಿತವಾಗಿದ್ದ ನನ್ನ ಯೋಚನೆಗಳಿಗೆ ಬ್ರೇಕ್ ಹಾಕಿದ್ದು ನನ್ನ ಬೈಕ್ ನ ಹಿಂದಿನ ಸೀಟ್ ನಲ್ಲಿ ಕೂತಿದ್ದ ಧನಂಜಯಣ್ಣ. ಎದುರಿಗಿದ್ದ ಪಟಾಕಿ ಅಂಗಡಿ ನೋಡಿ.

“ನಿಲ್ಸು, ನಿಲ್ಸು, ನಿಲ್ಸು….” ಅಂತ ನನ್ನ ಹೆಗಲನ್ನ ನಾಲ್ಕು ಸಾರಿ ತಟ್ಟಿದ್ರು.

“ಐದೇ ನಿಮಿಷ…. ಸ್ವಲ್ಪ ಪರ್ಚೇಸ್ ಇದೆ…. ನೀನು ಬಾ ಒಬ್ನೆ ಏನ್ ಮಾಡ್ತೀಯ ಇಲ್ಲಿ” ಅಂದ್ರು,

ದೀಪಾವಳಿಗೆ ಸಿಗೊ ರಜಾ, ಎಣ್ಣೆ ಸ್ನಾನ, ದೋಸೆ ಕಜ್ಜಾಯ ಬಿಟ್ರೆ ಈ ಪಟಾಕಿ, ಭೂಚಕ್ರ ಇದರಲ್ಯಾವುದರಲ್ಲು ಮೊದಲಿನಿಂದಲೂ ನಂಗೆ ಆಸಕ್ತಿ ಇರಲಿಲ್ಲ. ಅದೂ ಅಲ್ಲದೆ ಅಂಗಡಿಯ ಒಳಗೆ ಕಾಲಿಡೊಕೆ ಜಾಗ ಇಲ್ಲದಷ್ಟು ತುಂಬಿದ ಜನಸಾಗರವನ್ನ ನೋಡಿ ನಂಗೆ ಅವರ ಜೊತೆ ಹೋಗೊ ಮನಸಾಗಲಿಲ್ಲ.

“ಪರವಾಗಿಲ್ಲ, ನೀವು ಹೋಗ್ಬನ್ನಿ, ನಾನು ಇಲ್ಲೆ ಇರ್ತೀನಿ” ಅಂತ ಅವರನ್ನ ಅಲ್ಲಿಂದ ಕಳುಹಿಸಿ. 

ಹೆಲ್ಮೆಟ್ ತೆಗೆದು ಬೈಕ್ ಟ್ಯಾಂಕ್ ಮೇಲೆ ಇಟ್ಟು, ಸುಮ್ಮನೆ ಆ ಕಡೆ ಈ ಕಡೆ ನೋಡ್ತಾ ಇದ್ದೆ. ದೂರದಲ್ಲಿ ನೇತಾಜಿ ಪಾರ್ಕಿನ ಬೇಲಿಯ ಪಕ್ಕದ ದೊಡ್ಡ ಮರದ ಕೆಳಗೆ ಫುಟ್ ಪಾತ್ ನಲ್ಲಿ ಇಬ್ಬರು ಹುಡುಗಿಯರು ಮತ್ತೊಬ್ಬ ಚಿಕ್ಕ ಹುಡುಗ ಕೂತಿದ್ದು ಕಾಣಿಸ್ತು. ಮಾಮೂಲಿಯಾಗಿ ಬೆಳಗ್ಗೆ ಆಫೀಸ್ ಹೋಗೊವಾಗ ಹೂ ರಾಶಿ ಹಾಕೊಂಡು ಕೂರ್ತಾ ಇದ್ದದ್ದು ನೋಡಿದ್ದೆ, ಸಂಜೆ ಅವರನ್ನ ಅಲ್ಲಿ ನೋಡಿದ್ದು ನೆನಪಿರ್ಲಿಲ್ಲ. ಅದು ಅಲ್ಲದೆ ಇವತ್ತು ಹೂವಿನ ಜೊತೆ ಪಕ್ಕದಲ್ಲಿ ಇನ್ನೂ ಏನೊ ಸಣ್ಣ ರಾಶಿ ಕಾಣಿಸ್ತಿತ್ತು. ತುಂಬಾ ಜನ ಅಲ್ಲಿ ಬಂದು ಅದನ್ನ ತುಂಬಾ ಹೊತ್ತು ನೋಡಿ, ನೋಡಿ ಮತ್ತೆ ಅಲ್ಲೆ ಇಟ್ಟು ಹೋಗ್ತಿದ್ರು. ಏನು ಅನ್ನೊ ಸಣ್ಣ ಕುತೂಹಲದಿಂದ ನೋಡೊಣ ಅನ್ನೊ ಮನಸಾಯ್ತು. ಅಷ್ಟು ಹೊತ್ತಿಗಾಗಲೆ ಧನಂಜಯಣ್ಣ ಅಂಗಡಿಯಿಂದ ಹೊರಗಡೆ ಬರೋದು ಕಾಣಿಸ್ತಿತ್ತು. ಹತ್ತಿರ ಬಂದವರ ಕೈಯಲ್ಲಿ ಇದ್ದಿದ್ದು ಒಂದೇ ಒಂದು ಪ್ಲಾಸ್ಟಿಕ್ ಕವರ್.

“ಏನ್ ಧನಂಜಯಣ್ಣ, ಇಷ್ಟೇನ ದೀಪಾವಳಿ ಪರ್ಚೇಸ್” ಅಂದೆ.

“ಇಷ್ಟೆನಪ್ಪ, …ಈ ಸಿಟಿನಲ್ಲಿ ಜೋರಾಗಿ ಪಟಾಕಿ ಹೊಡ್ಯೋಣ ಅಂದ್ರೆ ನಮ್ಮ ಅಕ್ಕ ಪಕ್ಕದವರನ್ನೂ ನೋಡಿಕೊಳ್ಳ ಬೇಕಲ್ವ?” ಅಂದ್ರು

“ಓ ನೀವು ಹೇಳೊದು ನೋಡಿದ್ರೆ, ನಾವು ನಮಗೋಸ್ಕರ ಆರಾಮಾಗಿ ಬದುಕೋದು ಬಿಟ್ಟು, ಅಕ್ಕ ಪಕ್ಕ ದವರಿಗೋಸ್ಕರ ಅಡ್ಜಸ್ಟ್ ಮೆಂಟ್ ಬದುಕು ಬದುಕ ಬೇಕು ಅನ್ನಿ?...... ನೀವು ಪಟಾಕಿ ಹೊಡೆಯೋದಕ್ಕೆ ನಂಗೇನು ಅಭ್ಯಂತರ ಇಲ್ಲ” ಅಂತ ಹೆಲ್ಮೆಟ್ ಹಾಕಿ ಬೈಕ್ನಲ್ಲಿ ಕೂತೆ.

“ನೀನಿರೋದು ನಮ್ಮ ಮನೆ ರೈಟ್ ಸೈಡ್ ನಲ್ಲಿ ನಿಂದೇನೊ ಓಕೆ, ಆದ್ರೆ ಲೆಫ಼್ಟ್ ಸೈಡು??? ನಮ್ಮ ದೇಶದಲ್ಲಿ ರೈಟು ಎಷ್ಟು ಮುಖ್ಯಾನೋ ಲೆಫ಼್ಟು ಅಷ್ಟೆ ಮುಖ್ಯ” ಅಂತ ನಗುತ್ತಾ ಅವರು ಬೈಕ್ ಹತ್ತಿದ್ರು.

“ಅಂದ್ರೆ ನೀವು ಎರಡನ್ನೂ ಸರಿದೂಗಿಸೋ ‘ತೃತಿಯ ರಂಗ’ ಅನ್ನಿ???” ಅಂತ ಸಣ್ಣ ಬಡ ಹಾಸ್ಯ (ಇಂಗ್ಲಿಷ್ ನ ಪಿ.ಜೆ) ಮಾಡಿದೆ.

ಅಲ್ಲಿಂದ ಮನೆ ಕಡೆ ಹೊರಟ್ವಿ, ದಾರಿಯಲ್ಲಿ ಆ ಮಕ್ಕಳು ರಾಶಿ ಹಾಕಿಕೊಂಡು ಕೂತಿದನ್ನ ನೋಡ್ದೆ. ಒಬ್ಬಳು ಮಾಮೂಲಿ ಥರ ಹೂ ರಾಶಿ ಹಾಕೊಂಡಿದ್ಲು. ಪಕ್ಕದಲ್ಲಿ ಕೂತ ಹುಡುಗಿ ಕೆಂಪಗಿನ ಚಿಕ್ಕ ಚಿಕ್ಕ ವಸ್ತುಗಳ ರಾಶಿ ಹಾಕಿದ್ಲು, ಬೈಕ್ ಓಡಿಸ್ತಿದ್ದ ನನಗೆ ಹೆಲ್ಮೆಟ್ ನ ಸಣ್ಣ ಕಿಂಡಿಯಲ್ಲಿ ಅದು ಏನು ಅಂತ ಸರಿಯಾಗಿ ಕಾಣಲಿಲ್ಲ.
***
ನಾನಿದ್ದಿದ್ದು ಧನಂಜಯಣ್ಣನ ಮನೆ ಪಕ್ಕದ ಚಿಕ್ಕ ಬಾಡಿಗೆ ಮನೆಯಲ್ಲಿ, ಒಬ್ಬಂಟಿ ಬ್ಯಾಚುಲರ್ ಜೀವನ. ಒಂದೆ ಆಫಿಸ್ ನಲ್ಲಿ ಕೆಲಸ ಮಾಡೊದ್ರಿಂದ, ಅವರ ಮನೆಯಲ್ಲಿ ಸಲುಗೆಯಿಂದ ಓಡಾಡ್ತಾ ಇದ್ದೆ. ಹೆಚ್ಚು ಕಮ್ಮಿ ಊಟ, ತಿಂಡಿ ಎಲ್ಲಾ ಅಲ್ಲೆ ಅನ್ನ ಬಹುದು. ಬಂದು ಅರ್ಧಗಂಟೆ ಆಗಿರ್ಲಿಲ್ಲ ಏನೊ ಬೇಜಾರು ಅಂತ ಅವರ ಮನೆಗೆ ಹೋದೆ. ಸಂಜೆ ಅಂಗಡಿಯಿಂದ ತಂದಿದ್ದ ಕವರ್ ನ ತೆರಿತಾ ಕೂತಿದ್ರು. ಪಕ್ಕದಲ್ಲಿ ಅವರ ಚಿಕ್ಕ ಮಗಳು ‘ಮಿಂಚು’ ಅಪ್ಪ ಏನು ತಂದಿದಾರೆ ಅಂತ ಕುತೂಹಲದ ಬೆರಗು ಕಣ್ಣಿನಿಂದ ನೋಡ್ತಾ ಕೂತಿದ್ಲು. ನಾನು ಬಂದಿದ್ದು ನೋಡಿ ಮಾಮೂಲಿ ಕುಶಲೋಪರಿ ಮಾತನಾಡಿ ಅತ್ತಿಗೆ, ಅಂದ್ರೆ ಧನಂಜಯಣ್ಣನ ಅರ್ಧಾಂಗಿ!!! ಕಾಫಿ ಮಾಡೋಕೆ ಒಳಗಡೆ ಹೋದ್ರು. ಮಗಳ ಒತ್ತಾಯಕ್ಕೆ ಅಂತ ತಂದಿದ್ದ ಕೆಲವು, ಕಲರ್ ಕಡ್ಡಿ, ಭೂ ಚಕ್ರ ಹೀಗೆ ದೀಪಾವಳಿಯ ಬತ್ತಳಿಕೆಯಿಂದ ಒಂದೊಂದೆ ವಸ್ತುಗಳು ಹೊರಗಡೆ ಬರ್ತಾ ಇದ್ದವು. ಕೊನೆಯದಾಗಿ ಅವರ ಕವರ್ ನಿಂದ ಹೊರಬಂದ ಕಪ್ಪು ವಿದ್ಯುತ್ ವಯರ್ ಗಳನ್ನ ಸುರುಳಿ ಸುತ್ತಿದಂತೆ ಇದ್ದ ಹೊಸ ವಸ್ತುವಿನ ಕಡೆ ನನ್ನ ಗಮನ ಹರಿಯಿತು. ಅದಕ್ಕೆ ಒಂದಷ್ಟು ಪ್ಲಾಸ್ಟಿಕ್ ಹಣತೆಗಳು ಜೋತಾಡುತ್ತಿದುವು.

“ಇದೇನು ಪ್ಲಾಸ್ಟಿಕ್ ಹಣತೆನ ???” ಅಂದೆ

“ಹಾಂ….. ಇದರಲ್ಲಿ ಎಂಟು ಹಣತೆ ಇದೆ, ನಮ್ಮನೆ ಮನೆ ಕಾಂಪೌಂಡ್ ಗೆ ಇದು ಸಾಕು. ಎಣ್ಣೆ ಬೇಡ, ಬತ್ತಿ ಬೇಡ ಪ್ಲಗ್ ಸಿಕ್ಕಿಸೋದು ಸ್ವಿಚ್ ಹಾಕೋದು. ಈ ಸರ್ತಿ ನಮ್ಮದು ಪರಿಸರ ಸ್ನೇಹಿ ದೀಪಾವಳಿ ಹ… ಹ… ಹ “  ಅಂತ ಮತ್ತೆ ಬಡ ಹಾಸ್ಯ.
ನಮ್ಮಲ್ಲಿ ಪಂಚೆ, ಕಚ್ಚೆಯ ಜಾಗಕ್ಕೆ ಗೋಣಿ ಚೀಲದ ಪ್ಯಾಂಟ್ ಗಳು ಬಂತು, ಅಮ್ಮ ನ ಜಾಗಕ್ಕೆ ಮಮ್ಮಿ ಬಂತು, ಅಷ್ಟೆ ಯಾಕೆ ಅಚ್ಚ ಕನ್ನಡದ ದೀಪಾವಳಿಯ ಜಾಗಕ್ಕೆ ದಿವಾಲಿ ಬಂದು ನಮ್ಮ ದಿವಾಳಿ ಆಯ್ತು. ಈಗ ಪ್ಲಾಸ್ಟಿಕ್ ಹಣತೆ ವಾಹ್….. ಅಂತ ಮನಸಿಗೆ ಯೋಚನೆ ಬಂದು ನನ್ನ ಪಾಡಿಗೆ ನಾನೆ ಸಣ್ಣಕ್ಕೆ ನಕ್ಕೆ.
***
ಮರುದಿವಸ ಭಾನುವಾರ, ಇಡೀ ದಿವಸ ಜಾಹಿರಾತು ಗಳ ಮಧ್ಯೆ ಬರುವ ಅಲ್ಪ ಸ್ವಲ್ಪ ಕಾರ್ಯಕ್ರಮಗಳನ್ನ ಟಿವಿ ಯಲ್ಲಿ ನೋಡ್ತ ಸಮಯ ಸಂಹಾರದ ಕೆಲಸ ಬಿಟ್ಟರೆ ಬೇರೆ ಏನು ಕೆಲಸವಿರಲಿಲ್ಲ. ನಮ್ಮಲ್ಲಿ ಮನೆಗೆ ಹಬ್ಬಕ್ಕೆ ಮುಂಚೆ ಸ್ವೀಟ್, ಪಟಾಕಿ ತಂದರೆ ಒಂದು ತೊಂದರೆ ಇದೆ. ಸ್ವೀಟ್ ಡಬ್ಬ ಗಳನ್ನ ಪಟಾಕಿ ಡಬ್ಬಗಳನ್ನ ನೋಡಿ ಸ್ಯಾಂಪಲ್ ಸ್ಯಾಂಪಲ್ ಅಂತ ಹಬ್ಬದ ಹಿಂದಿನ ದಿವಸ ಓಪನ್ ಮಾಡದೇ ಇದ್ದರೆ ತಿಂದ ಅನ್ನ ಕರಗೋದೇ ಇಲ್ಲ. ಸೋಮವಾರ ಹಬ್ಬ ಶುರುವಾಗೋದಿದ್ರೂ ಕೂಡ ಭಾನುವಾರದಿಂದಲೆ ಅಲ್ಲೊಂದು ಇಲ್ಲೋಂದು ಢಂ ಢಂ ಶಬ್ದಗಳು ಕೇಳೊಕೆ ಶುರುವಾಗುತ್ತೆ. ಧನಂಜಯಣ್ಣನೂ ಕೂಡ ಪ್ರಯೋಗಾರ್ಥವಾಗಿ ತಮ್ಮ ಮನೆ ಕಾಂಪೌಂಡ್ ದಂಡೆಯ ಮೇಲೆ ಸಾಲಾಗಿ ಸ್ವಯಂ ಘೋಷಿತ ಪರಿಸರ ಸ್ನೇಹಿ ಪ್ಲಾಸ್ಟಿಕ್ ದೀಪವನ್ನ ಹಚ್ಚೊದಕ್ಕೆ ಸಜ್ಜಾದ್ರು. ತಲೆಗೆ ಹೊದ್ದರೆ ಕಾಲಿಗಿಲ್ಲ, ಕಾಲಿಗೆ ಹೊದ್ದರೆ ತಲೆಗಿಲ್ಲ ಅನ್ನೋಹಾಗೆ, ಕಾಂಪೌಂಡ ನಲ್ಲಿ ದೀಪ ಇಟ್ಟರೆ ಪ್ಲಗ್ ಎಲ್ಲಿಯು ಚುಚ್ಚೊಕಾಗಲ್ಲ, ಮನೆಯೊಳಗಡೆ ಪ್ಲಗ್ ಚುಚ್ಚಿದರೆ ಕಾಂಪೌಂಡ್ ಗೆ ತರಲು ವಯರ್ ಉದ್ದವಿಲ್ಲ. ಸರಿ ಮನೆಯ ಯಾವುದೋ ಮೂಲೆಯಲ್ಲಿದ್ದ ಸಂಪರ್ಕ ವಿಸ್ತ್ರುತ್ ಡಬ್ಬ(ಎಕ್ಸ್ ಟೆನ್ಷನ್ ಬಾಕ್ಸ್) ವೂ ಹೊರಬಂತು, ಸಂಪರ್ಕವೂ ಆಯಿತು. ದೀಪವೂ ಉರಿಯಿತು. “ಅಬ್ಬಾ…” ಅನ್ನೊ ಉಸಿರು ಬಿಡುವ ಹೊತ್ತಿಗೆ ಬಂದ ಸಣ್ಣ ಗಾಳಿಗೆ ಹಣತೆಗಳು ಕಾಂಪೌಂಡ್ ದಂಡೆ ಬಿಟ್ಟು ಗೋಡೆಯ ಮೇಲೆ ನೇತಾಡೊಕೆ ಶುರುವಾಯ್ತು. ಮತ್ತೆ ಅದನ್ನ ದಂಡೆ ಮೇಲಿಟ್ಟು ಪ್ಲಾಸ್ಟಿಕ್ ಹಣತೆಗಳ ನಡುವೆ ಇದ್ದ ವಯರ್ ಗಳ ಮೇಲೆ ಸಣ್ಣ ಸಣ್ಣ ಕಲ್ಲುಗಳನ್ನಿಟ್ಟು ಗಾಳಿಗೆ ಅಲುಗಾಡದಂತೆ ಮಾಡಿದ ಧನಂಜಯಣ್ಣನಿಗೆ ಹಬ್ಬ ಶುರುವಾಗೊ ಮುನ್ನವೇ ಸುಸ್ತಾಗಿತ್ತು.

ಸಂಜೆ ಎಲ್ಲಾದರೂ ಹೊರ ಹೋಗೊ ಮನಸಾಯಿತು. ಧನಂಜಯ್ಯಣ್ಣ ಮತ್ತು ಮನೆಯವರು ಹಬ್ಬದ ತಯಾರಿಯಲ್ಲಿದ್ದರಿಂದ ನಾನೊಬ್ಬನೆ ಹೊರಟೆ. ಹತ್ತಿರದಲ್ಲೇ ಇದ್ದ ನೇತಾಜಿ ಪಾರ್ಕ್ ಗೆ ಹೋಗಿ ಕೂತರೆ ಅಲ್ಲೂ ಕೂಡ ಭಾನುವಾರದ ಜನಸಾಗರ ಕಾಣಲಿಲ್ಲ. ಎಲ್ಲರೂ ಕೂಡ ಹಬ್ಬದ ತಯಾರಿಯಲ್ಲಿದ್ದಿರ ಬಹುದು. ಸ್ವಲ್ಪ ಕತ್ತಾಲಾಗುತ್ತಿದ್ದ ಹಾಗೆ ಅಲ್ಲಿಂದ ಹೊರಟೆ. ಹೊರಗಡೆ ಹೂ ಮಾರುವ ಜಾಗದಲ್ಲಿ ಇವತ್ತು ಒಬ್ಬಳು ಹುಡುಗಿ ಮಾತ್ರ ಕೂತಿದ್ದಳು. ಚಿಕ್ಕ ಹುಡುಗಿ ಹತ್ತನ್ನೆರಡು ವಯಸ್ಸಿರ ಬಹುದು. ಆದ್ರೆ ಅವಳ ಬಳಿ ಇವತ್ತು ಹೂ ಇರಲಿಲ್ಲ. ಹತ್ತಿರ ಹೋಗಿ ನೋಡಿದೆ ಅದು ಪುಟ್ಟ ಪುಟ್ಟ ಮಣ್ಣಿನ ಹಣತೆಗಳ ಚಿಕ್ಕ ರಾಶಿ. ಇನ್ನು ಹತ್ತಿರ ಹೋಗಿ ಒಂದು ಹಣತೆ ಕೈಗೆತ್ತಿಕೊಂಡೆ. ಆ ಹುಡುಗಿಯ ಕಣ್ಣುಗಳು ಅರಳಿನಿಂತವು

“ಬೇಕ ಅಣ್ಣ????” ಅಂತ ಉತ್ಸಾಹದಿಂದ ಕೇಳಿದಳು.

ಹಣತೆಗಳು ಗಾತ್ರದಲ್ಲಿ ಸಣ್ಣದಾದರೂ ಅಚ್ಚುಕಟ್ಟಾದ ವಿನ್ಯಾಸವಿತ್ತು. ಒಂದು ಹಣತೆಗೆ ಕಮ್ಮಿ ಅಂದರು ಹತ್ತರಿಂದ ಹದಿಮೂರು ರೂಪಾಯಿಯಾದರೂ ಇರಬಹುದು ಅಂತ ಲೆಕ್ಕ ಹಾಕಿದೆ. ಆದರೂ ಕೊಳ್ಳುವ ಅವಶ್ಯಕೆಯೆನು ನನಗೆ ಇಲ್ಲದ್ದರಿಂದ.

“ಇಲ್ಲ ಸುಮ್ಮನೆ ನೋಡಿದ್ದು ಅಷ್ಟೆ” ಅಂದಾಗ ಅರಳಿದ್ದ ಅವಳ ಮುಖ ಸಣ್ಣಗೆ ಬಾಡಿ ಹೋಯಿತು. ಹೊರಡೊಕೆ ಎದ್ದು ನಿಂತೆ.

“ಜೋಡಿ ಹತ್ತು ರೂಪಾಯಿ ಅಣ್ಣ, ಒಂದು ಜೋಡಿ ಹಣತೆನಾದ್ರು ತೆಗೊಳಿ ಅಣ್ಣ “ ಅಂದಾಗ ಆಶ್ಚರ್ಯ ಆಯ್ತು. ಹತ್ತು ರೂಪಾಯಿಗೆ ಜೋಡಿ??? ಪ್ಲಾಸ್ಟಿಕ್ ಹಣತೆಯ ಅವಸ್ತೆಯನ್ನ ನೋಡಿದ ನನಗೆ ಹತ್ತು ರೂಪಾಯಿ ಜೋಡಿ ಅಂದಾಗ ಮತ್ತೆ ಸಣ್ಣಗೆ ಮನಸ್ಸು ಆ ಕಡೆ ಸೆಳೆಯೋದಕ್ಕೆ ಶುರುವಾಯ್ತು. ಮತ್ತೆ ತಿರುಗಿ ಹಣತೆಗಳ ಮೇಲೆ ಕೈಯಾಡಿಸೋದಕ್ಕೆ ಶುರುಮಾಡಿದೆ. ನಡುತಲೆಯನ್ನ ಒಪ್ಪವಾಗಿ ಬಾಚಿ ಎರಡು ಜಡೆಯನ್ನ ಹೆಣೆದಿದ್ದ ಆ ಮುದ್ದು ಹುಡುಗಿಯ ಕಣ್ಣುಗಳು ಮತ್ತೆ ಉತ್ಸಾಹದಿಂದ ನನ್ನ ಕೈಗಳನ್ನೆ ಗಮನಿಸುತ್ತಿದ್ದವು. ನಾಲ್ಕು ಹಣತೆಗಳನ್ನ ಆರಿಸಿ ತೆಗೆದೆ.

“ಈ ನಾಲ್ಕು ಹಣತೆ ಸಾಕು” ಅಂತ ಇಪ್ಪತ್ತು ರೂಪಾಯಿ ಜೇಬಿಂದ ತೆಗೆದು ಹುಡುಗಿ ಕೈಗಿಟ್ಟೆ. ಸಂತೋಷದ ಕಣ್ಣುಗಳು ನನ್ನನ್ನೇ ನೋಡ್ತಿದ್ದವು. ಅವಳ ಮುಖವನ್ನ ನೋಡಿ ಮತ್ತೆ ಮನಸಲ್ಲೆ ಲೆಕ್ಕ ಹಾಕಿದೆ, ಜೋಡಿಗೆ ಹತ್ತು ಅಂದರೆ 4 ಹಣತೆಗೆ 20ರೂಪಾಯಿ ಸರಿಯಾಗಿದೆ.

ಖುಶಿಯಿಂದ ದುಡ್ಡು ತೆಗೊಂಡ್ಳು. ಆ ಖುಷಿಯ ನಡುವೆಯು ಆ ಪುಟ್ಟ ಕಣ್ಣುಗಳಲ್ಲಿ ಸಣ್ಣಗೆ ಹರಿದ ಕಣ್ಣೀರನ್ನ ಗಮನಿಸಿದೆ, ಕೈಯಿಂದ ಮೆಲ್ಲಗೆ ವರೆಸಿಕೊಂಡು ಕೆಂಪಗಾಗಿದ್ದ ಕಣ್ಣುಗಳು ಮತ್ತೆ ನನ್ನನ್ನ ನೋಡಿ ಮಂದಹಾಸ ಬೀರಿದವು. ಹೊರಡಲು ಅಣಿಯಾಗಿದ್ದರೂ ನನಗೆ ಅವಳ ಸಂತೋಷ ಭರಿತ ಕಣ್ಣೀರಿನ ಕಾರಣ ತಿಳಿಯಬೇಕು ಅನ್ನಿಸ್ತು.

“ನಿನ್ನೆ ಇಂದ ಎಷ್ಟು ಹಣತೆ ಮಾರಿದೆ ಪುಟ್ಟ ???” ಅಂತ ಮಾತಿಗೆಳೆದೆ. ಅವಳಿಗೆ ಏನನ್ನಿಸ್ತೋ ಏನೊ

“ಒಂದು ಇಲ್ಲ ಅಣ್ಣ, ಎಲ್ಲಾರು ಬರ್ತಾರೆ ನೋಡ್ತಾರೆ, ಐದು ರುಪಾಯಿ ಅಂದ್ರೆ ಮೂರು ರುಪಾಯಿ ಎರಡು ರುಪಾಯಿ ಅಂತ ಚೌಕಾಸಿ ಮಾಡ್ತಾರೆ. “ ಅಂತ ಅಳು ಮಿಶ್ರಿತ ದನಿಯಲ್ಲಿ ಹೇಳೊದಕ್ಕೆ ಶುರು ಮಾಡಿದ್ಲು. ಈ ಪುಟ್ಟ ಹುಡುಗಿಯ ಹತ್ತಿರ ಇಂತಹ ಕೀಳು ಮಟ್ಟದ ಚೌಕಾಸಿಗಿಳಿಯುವ ಜನರ ಮನಃಸ್ಥಿತಿಯನ್ನ ನೋಡಿ ನನಗೆ ಅಸಹ್ಯ ಅನ್ನಿಸ್ತು. ಮತ್ತೆ ತನ್ನ ಪುಟ್ಟ ಕೈಗಳಿಂದ ಕಣೀರು ಒರೆಸಿಕೊಂಡಳು.

“ಇಷ್ಟು ಹಣತೆಯನ್ನ ನಾನು ಮಾರಾಟ ಮಾಡ್ಲಿಲ್ಲ ಅಂದ್ರೆ, ನಮ್ಮನೆಲಿ ಈ ವರ್ಷ ದೀಪಾವಳಿನೆ ಇಲ್ಲಾ ಅಣ್ಣ….” ಅಂತ ಹೇಳಿ ಅತ್ತಾಗ ನನಗೇನು ಮಾಡ ಬೇಕು ಅಂತನೆ ತೋಚಲಿಲ್ಲ. ಅವಳ ಆ ಮಾತು ಕೇಳಿ ತುಂಬಾನೆ ಬೇಜಾರಾಯ್ತು, ಚಿಕ್ಕ ಚಿಕ್ಕ ಹಣತೆಯನ್ನ ಮಾರಿ ದೊಡ್ಡ ದೀಪಾವಳಿಯ ಕನಸು ಕಾಣೊ ಕಣ್ಣುಗಳು, ಈ ಕೊಳಕು ಪ್ರಪಂಚದ ಸತ್ಯ ಅರಿಯದೇ ಮನೆಯಲ್ಲಿ ಸಂತೋಷದಿಂದ ದೀಪಾವಳಿ ಆಚರಿಸಬೇಕು ಅಂತ ಇರೋ ಈ ಮುಗ್ಧ ಹೃದಯಕ್ಕೆ ಸಹಾಯಮಾಡ ಬೇಕು ಅಂತ ನಿರ್ಧಾರ ಮಾಡಿದೆ. ಅವಳ ಹತ್ತಿರ ಒಟ್ಟಿಗೆ 30 ಹಣತೆಗಳಿದ್ದವು ನನಗೆ ಮಾರಿದ್ದು ಬಿಟ್ಟರೆ ಉಳಿದದ್ದು 26. ಅದಷ್ಟನ್ನೂ ಅವಳು ತಂದಿದ್ದ ಪುಟ್ಟ ಪ್ಲಾಸ್ಟಿಕ್ ಚೀಲಕ್ಕೆ ಹಾಕಿ. 150 ರೂಪಾಯಿ ಅವಳ ಕೈಗಿಟ್ಟೆ. ಒಂದು ಸರ್ತಿ ನನ್ನ ಮುಖವನ್ನ ನೋಡಿ ಮತ್ತೆ ಆ ನೋಟುಗಳನ್ನ ನೋಡಿ ಗಟ್ಟಿಯಾಗಿ ಅದಕ್ಕೊಂದು ಮುತ್ತು ಕೊಟ್ಳು.
ಅವಳ ಕಣ್ಣಲ್ಲಿ ಸುರಿತಾ ಇದ್ದ ಕಣ್ಣೀರನ್ನ ಒರೆಸಿದೆ

“ಅಳ್ಬೇಡ…. ಮನೆಗ್ ಹೋಗು….ದೇವರು ಒಳ್ಳೆಯದು ಮಾಡ್ಲಿ ” ಅಂದೆ

“ನಿಮ್ಮಿಂದ ತುಂಬ ಉಪಕಾರ ಆಯ್ತು, ಬರ್ತೀನಣ್ಣ” ಅಂತ ಹೇಳಿ ಒಂದು ಕೈಯಲ್ಲಿ ಗಟ್ಟಿಯಾಗಿ ದುಡ್ಡಿ ಹಿಡಕೊಂಡು ಇನ್ನೊದು ಕೈಯಲ್ಲಿ ಕಣ್ಣೀರು ಒರೆಸಿಕೊಂಡು ಖುಶಿಯಿಂದ ಓಡಿದ್ಲು. ಪಟ ಪಟನೆ ಹಾರುತ್ತಿದ್ದ ಆ ಪುಟ್ಟ ಜಡೆಗಳನ್ನ ನೋಡಿದ್ರೆ ಗೊಂಬೆಗೆ ಜೀವ ಬಂದು ಓಡ್ತಾ ಇರೊ ಹಾಗೆ ಭಾಸವಾಗ್ತಿತ್ತು.
***
ಮನೆಗೆ ಬಂದವನಿಗೂ ಆ ಹುಡುಗಿಯ ಮುದ್ದು ಮುಖವೇ ನೆನಪಾಗ್ತಿತ್ತು. ಬರೇ ಪಟಾಕಿಗೆ ಸಾವಿರಾರು ರುಪಾಯಿ ಉಡಯಿಸೋರ ಮಧ್ಯೆ. ಬರೇ ಹಣತೆ ಮಾರಿ ಬರುವ 150 ರುಪಾಯಿಯಲ್ಲಿ ಹಬ್ಬ ಮಾಡೊ ಆ ಹುಡುಗಿಯ ಉತ್ಸಾಹ ನೋಡಿ ಬೇಜಾರಯ್ತು. ಏನೊ ಸಣ್ಣ ಯೋಚನೆ ಹೊಳೆಯಿತು. ಕೂಡಲೆ ಹಣತೆಗಳನ್ನ ತೆಗೆದುಕೊಂಡು ಹೊರಗಡೆ ಬಂದೆ. ಧನಂಜಯಣ್ಣನ ಪರಿಸರ ಸ್ನೇಹಿ ಪ್ಲಾಸ್ಟಿಕ್ ದೀಪ ಆಗಲೇ ಉರಿತಾ ಇತ್ತು.. ಸೀದ ಅಂಗಡಿಗೆ ಹೋಗಿ ಸ್ವಲ್ಪ ಎಣ್ಣೆ ಬತ್ತಿಯನ್ನ ತಗೊಂಡು ಬಂದೆ. ಮನೆಯ ಕಾಂಪೌಂಡ್ ದಂಡೆಯ ಮೇಲೆ ಸ್ವಲ್ಪ ಸ್ವಲ್ಪ ಅಂತರದಲ್ಲಿ ಹಣತೆಗಳನ್ನ ಇಟ್ಟು ಎಣ್ಣೆಯಲ್ಲಿ ಅದ್ದಿ ಬತ್ತಿ ಇಟ್ಟು ಎಲ್ಲದಕ್ಕೂ ಎಣ್ಣೆ ತುಂಬಿದೆ. ಒಂದೊಂದೆ ಹಣತೆಯನ್ನ ಹಚ್ಚುತ್ತಾ ಬಂದೆ. ಮನೆಯಿಂದ ಹೊರ ಬಂದು ನೋಡಿದ ಧನಂಜಯಣ್ಣ.

“ಅರೆ ದೀಪಾವಳಿ ಇವತ್ತೆ ಶುರುನ????” ಅಂತ ಉತ್ಸಾಹದಿಂದ ಮಗಳನ್ನ ಹೆಂಡತಿಯನ್ನ ಕೂಗಿದರ್ರು. 

ನನ್ನ ಮನೆಯ ಎಡಬದಿಯ ಕಾಂಪೌಂಡ್ ಮತ್ತು ಅವರ ಮನೆಯ ಕಾಂಪೌಂಡ್ ಎರಡೂ ಒಂದೆ ನಾನು ಎಣ್ಣೆ ತುಂಬಿ ಇಟ್ಟಿದ್ದ ಹಣತೆಯನ್ನ ಅವರು ಕೂಡ ಅವರ ಮನೆಯ ಅಂಗಳದಲ್ಲಿ ನಿಂತು ಹಚ್ಚೊದಕ್ಕೆ ಶುರು ಮಾಡಿದ್ರು. ಅಲ್ಲಲ್ಲಿ ಪಟಾಕಿಯ ಢಮ್ ಢಮ್ ಶಬ್ದಗಳು ಕೇಳುತ್ತಾ ಇದ್ದವು. ಇನ್ನೇನು ಎರಡು ಮೂರು ಹಣತೆ ಹಚ್ಚುವುದು ಬಾಕಿ ಇದೆ ಅನ್ನುವ ಹೊತ್ತಿಗೆ ಇದ್ದಕ್ಕಿದ್ದ ಹಾಗೆ ಕರೆಂಟ್ ಹೋಯ್ತು. ಪಕ್ಕದ ಮನೆಗಳು ಮನೆಯೆದುರಿದ್ದ ಅಂಗಡಿ, ಬೀದಿ ದೀಪ ಎಲ್ಲವೂ ಆಫ್! ಧನಂಜಯ್ಯಣ್ಣನ ಪ್ಲಾಸ್ಟಿಕ್ ಹಣತೆಯ ಸುಳಿವೇ ಇರಲಿಲ್ಲ.

ಇಡೀ ಬೀದಿಗೆ ಬೀದಿಯೇ ಕತ್ತಲು ಕತ್ತಲು….. ಇಂತಹ ಕತ್ತಲಿನ ನಡುವೆ ನನ್ನ ಅಂಗಳದ ತುಂಬ ತುಂಬಿಕೊಂಡಿದ್ದ ಹಣತೆಯ ಸಾಲುಗಳನ್ನ ನೋಡಿ ನಾನೆ ಬೆರಗಾಗಿ ಹೋದೆ. ಕಣ್ಣ ಮುಂದೆ ದೀಪೋತ್ಸವದ ಹೊಸ ಪ್ರಪಂಚವೇ ಸೃಷ್ಟಿಯಾಗಿತ್ತು. ಪಕ್ಕದಲ್ಲಿ ಹಣತೆ ಹಚ್ಚುತ್ತಿದ್ದ ಧನಂಜಯಣ್ಣ, ಅತ್ತಿಗೆಯೂ ಕೂಡ ಕಣ್ಣ ಮುಂದಿದ್ದ ಹಣತೆಗಳ ಸೌಂದರ್ಯವನ್ನ ನೋಡಿ ಕಣ್ಣ ಮುಚ್ಚೋದೆ ಮರೆತು ಹೋಗಿತ್ತು.  ಹುಟ್ಟಿನಿಂದ ಇಲ್ಲಿಯವರೆಗೆ ನಾನು ಯಾವತ್ತು ಈ ರೀತಿಯ ಬೆಳಕಿನ ಹಬ್ಬವನ್ನ ಕಂಡಿರಲಿಲ್ಲ. ಧನಂಜಯ್ಯಣ್ಣನ ಪ್ಲಾಸ್ಟಿಕ್ ಹಣತೆಯಾಗಲಿ, ಊರಿನ ನೆನಪಾಗಲಿ ಯಾವುದು ನನ್ನ ಕಣ್ಣ ಮುಂದೆ ಬರಲಿಲ್ಲ. ನನ್ನ ಕಣ್ಣ ಮುಂದೆ ಪ್ರತ್ಯಕ್ಷವಾದದ್ದು ಈ ಹಣತೆಗಳನ್ನ ಮಾರುತ್ತಿದ್ದ ಆ ಪುಟ್ಟ ಹುಡುಗಿಯ ಮುಖ.


“ನಿಜ… ನಾನು ದುಡ್ಡು ಕೊಟ್ಟಾಗ ಖುಷಿಯಿಂದ ಕಣ್ತುಂಬಿದ್ದ ಆ ಹುಡುಗಿಯ ಕಣ್ಣಲ್ಲಿದ್ದ ಕಾಂತಿಗು, ನಾನು ಹಚ್ಚಿದ ಈ ಹಣತೆ ಹೊರ ಹೊಮ್ಮಿಸುತ್ತಿರುವ  ಬೆಳಕಿನ ಕಾಂತಿಗೂ ಯಾವ ವ್ಯತ್ಯಾಸವೂ ಇರಲಿಲ್ಲ”



ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಬಹುದು.

ಒಂದು ಹುಚ್ಚನ ಕಥೆ


ಒಂದು ಹುಚ್ಚನ ಕಥೆ

ಸಂಜೆ ಆರು ಮುಕ್ಕಾಲು, ಏಳು ಗಂಟೆ ಹೊತ್ತು. ಗಿರಿಸಾಗರದಿಂದ ಬರೊ ಕೊನೆ ಬಸ್ಸು ಈಗಷ್ಟೆ ಮಂಜಿನಕೊಪ್ಪ ಬಸ್ ಸ್ಟಾಪ್ ಬಂದು ತಲುಪಿತ್ತು. ಮಂಜಿನ ಕೊಪ್ಪಕ್ಕೆ ಹತ್ತಿರದಲ್ಲಿರೋ ದೊಡ್ಡ ಪಟ್ಟಣ ಅಂದ್ರೆ ಗಿರಿಸಾಗರ. ದೊಡ್ಡ ಪಟ್ಟಣ ಅಂದ್ರೆ ಮಂಜಿಕೊಪ್ಪಕ್ಕಿಂತ ಸ್ವಲ್ಪ ದೊಡ್ಡದು ಅಷ್ಟೆ. ಅದು ಅವತ್ತಿನ ಕೊನೆ ಬಸ್. ಕೊನೆ ಬಸ್ ಆಗಿದ್ರಿಂದ ಜನಾನು ಹೆಚ್ಚು, ಅದರ ಜೊತೆಗೆ ದೊಡ್ಡ ದೊಡ್ಡ ತರಕಾರಿ ಚೀಲ, ಹೂವಿನ ಬುಟ್ಟಿ. ಕೊನೆ ಟ್ರಿಪ್ ಪ್ರಯಾಣ ಅಂದ್ರೆ ಸ್ವಲ್ಪ ಪ್ರಯಾಸಾನೆ ಸರಿ.
ಆದರೆ ಚಕ್ರಪಾಣಿಗೆ ಬೇರೆ ದಾರಿ ಇರ್ಲಿಲ್ಲ. ಅವನ ಮನೆ ಇರೋದು ಮಂಜಿನ ಕೊಪ್ಪದಲ್ಲಿ. ಅವನು ಅವನ ಅಮ್ಮ ಇಬ್ಬರೆ ಇರೋದ್ರಿಂದ ಅಮ್ಮನನ್ನ ಒಬ್ಬಳನ್ನೆ ಬಿಟ್ಟು ಇರೋ ಹಾಗಿಲ್ಲ. ಹಾಗಾಗಿ ಕೆಲಸಕ್ಕೆ ಮಂಜಿನಕೊಪ್ಪದಿಂದ ಗಿರಿಸಾಗರಕ್ಕೆ ದಿನಾ ಹೋಗೋದು ಬರೋದು ಮಾಡ್ತಾ ಇದ್ದ. ಅದೇನು ಜಾಸ್ತಿ ದೂರದ ಊರಲ್ಲ, ಅಲ್ಲಿಂದ ಗಿರಿಸಾಗರಕ್ಕೆ ಇದ್ದಿದ್ದು 17 ಕಿ.ಮಿ. ಅಷ್ಟೆ. ಆದ್ರೆ ಅಲ್ಲಿನ  ರಸ್ತೆಗಳೆ ದೊಡ್ಡ ಪ್ರಾಬ್ಲಮ್.

ಪ್ರತಿ ದಿನದ ಹಾಗೆ ಇವತ್ತು ಕೂಡ ಬಸ್ ನಿಂದ ಇಳಿದು ಮನೆಕಡೆ ಹೊರಟ, ಪೇಟೆಯಿಂದ ಅರ್ಧ-ಮುಕ್ಕಾಲು ಕಿ.ಮಿ. ನಡ್ಕೊಂಡು ಹೋಗೊ ಒಳದಾರಿ, ಪೇಟೆ ದಾರಿ ಮುಗಿಯುವ ಮೊದಲೇ ದಾರಿನಲ್ಲಿ ದುರ್ಗಾಪರಮೇಶ್ವರಿಯ ಚಿಕ್ಕ ದೇವಸ್ಥಾನ ಸಿಗುತ್ತೆ, ಪ್ರತೀದಿನ ಅದರ ಮುಂದೆ ನಿಂತು ಚಪ್ಪಲಿ ಬಿಚ್ಚಿ ನಮಸ್ಕಾರಮಾಡಿ ಮುಂದೆ ಹೋಗೊದು ಚಕ್ರಪಾಣಿ ಹವ್ಯಾಸ. ಮಂಗಳವಾರ ಶುಕ್ರವಾರ ಗಳನ್ನ ಬಿಟ್ಟ್ರೆ ಅಲ್ಲಿ ಜಾಸ್ತಿ ಜನಾ ಇರೊದಿಲ್ಲ. ಅವತ್ತು ಬುಧವಾರವಾದ್ದರಿಂದ ಗುಡಿಗೆ ತುಂಬಾ ಹತ್ರ ಹೋಗಿ ನಮಸ್ಕಾರಮಾಡ್ತಾ ಇದ್ದ. ಅಷ್ಟರಲ್ಲಿ  ಯಾರೋ ಇವನ್ನ ನೋಡಿ

“ನಮಸ್ಕಾರ ಸಾರ್”    ಅಂದಹಾಗಾಯ್ತು

ನಮಸ್ಕಾರ ಮಾಡ್ತಿದ್ದ ಚಕ್ರಪಾಣಿ ಕಣ್ಣು ಬಿಟ್ಟು ಆ ಕಡೆ ಈ ಕಡೆ ನೋಡಿದ,  ಗುಡಿಯ ಬಾಗಿಲಿನ ಪಕ್ಕದಲ್ಲೆ ಇದ್ದ ಖಾಲಿ ಜಾಗದಲ್ಲಿ ಒಂದು ಹರಿದಿರೊ ಚಾಪೆ ಹಾಕೊಂಡು ಯಾವನೋ ಒಬ್ಬ ಮಲಗಿದ್ದ. ಉದ್ದದ ಗಡ್ಡ, ಕತ್ತರಿ, ಬಾಚಣಿಕೆ ಕಾಣದೆ ಕೆದರಿರೋ ಉದ್ದದ ಕೂದಲು, ಅಂಗಿಯಂತು ಯಾವ ಬಣ್ಣ ಅಂತ ಹೇಳೊದು ಕಷ್ಟ, ಬೆಳ್ಳಗೆ ಫಂಗಸ್ ಹಿಡಿದು ಅಲ್ಲಲ್ಲಿ ಹರಿದು ಹೋದ ಜೀನ್ಸ್ ಪ್ಯಾಂಟ್. ಈ ಹಿಂದೆನು ಗುಡಿಪಕ್ಕದಲ್ಲಿ ಮಲಗಿರೋದು, ಅಗಾಗ ಏನೇನೊ ಮಾತನಾಡೊದು ಅದನ್ನೆಲ್ಲ ಚಕ್ರಪಾಣಿಯೂ ನೋಡಿದ್ದ, ಹುಚ್ಚ ಹುಚ್ಚ ಅಂತ ಮಕ್ಕಳು ಕೂಡ ಅವನನ್ನ ರೇಗಿಸ್ತಾ ಇರ್ಥಾರೆ. ಇವತ್ತು ಮಾತ್ರ ಅವನನ್ನ ತುಂಬಾ ಹತ್ತಿರದಿಂದ ನೋಡಿದ್ದ, ತಿರುಗಿ ನಮಸ್ಕಾರ ಮಾಡಬೇಕು ಅಂತ ಚಕ್ರಪಾಣಿಗೆ ಅನಿಸಲಿಲ್ಲ. ಹುಚ್ಚನ ಸಹವಾಸ ಯಾಕೆ ಅಂತ ಚಪ್ಪಲಿ ಹಾಕಿಕೊಂಡುಅ ಸುಮ್ಮನೆ ಮನೆ ದಾರಿ ಹಿಡಿದ.

ಯಾವಾಗಲೂ ತಂಪಗಿರೊ ಮಂಜಿನಕೊಪ್ಪದಲ್ಲಿ ಅವತ್ತು ಮಾಮೂಲಿಗಿಂತ ಥಂಡಿ ಜಾಸ್ತಿನೆ ಇತ್ತು. ಇವನಿಗೆ ನೆಗಡಿ ಆಗಿದ್ರಿಂದ ಗಂಟಲಲ್ಲಿ ಏನು ಕಿರಿ ಕಿರಿ ಅನ್ನಿಸ್ತಿತ್ತು. ಅವನು ಹೋಗ್ತಾ ಇದ್ದ ಬೀದಿ ಕೊನೆನಲ್ಲಿ ಒಂದು ಮೆಡಿಕಲ್ ಇದೆ. ಅದೇ ಕೊನೆ, ಆ ಮೆಡಿಕಲ್ ಗಿಂತ ಆಚೆ ಯಾವ ಅಂಗಡಿನೂ ಇಲ್ಲ. ಅದರಾಚೆಗೆ ಏನಿದ್ರು ತೋಟ ಎಸ್ಟೇಟ್ ಗಳು ಮಾತ್ರ. ಜನ ಸಂಚಾರ ಕಡಿಮೆ ಇರೋ ಪ್ರದೇಶ, ಎರಡು ಮೂರು ಮನೆಗಳು ದಾರಿ ಪಕ್ಕದಲ್ಲೇ ಇರೋದು ಬಿಟ್ರೆ. ಉಳಿದ ಮನೆಗಳೆಲ್ಲಾ ಎಲ್ಲೋ ತೋಟದ ಮಧ್ಯೆ ರಾತ್ರಿ ಲೈಟ್ ಉರಿಯೋದು ಕಾಣಿಸ್ತಾವೆ ಅಷ್ಟೆ.
ರಾತ್ರಿ ನೆಗಡಿ ಜೋರಾದ್ರೆ ಕಷ್ಟ ಅಂದುಕೊಂಡು ಸೀದ ಮೆಡಿಕಲ್ ಗೆ ಹೋಗಿ, ಮಾತ್ರೆ, ಗಂಟಲು ಕಿರಿಕಿರಿಗೆ ವಿಕ್ಸ್ ತೆಗೊಂಡು ಅಲ್ಲಿಂದ ಹೊರಟ, ಹತ್ತು ಹೆಜ್ಜೆ ಮುಂದೆ ಬಂದವನಿಗೆ ಏನೊ ಮರ್ತಿದಿನಿ ಅಂತ ಅನ್ನಿಸ್ತು ನಿಂತು ಬಿಟ್ಟ, ನೆನಪಾಗ್ಲಿಲ್ಲಾ ಅಂತ ಮತ್ತೆ ಎರಡು ಹೆಜ್ಜೆ ಇಟ್ಟವನು

“ ಓ ಅಮ್ಮ ಸೊಂಟ ನೋವು ಅಂತ ಮಾತ್ರೆ ಹೇಳಿದ್ಲು ಅಲ್ವ???” ಅಂತ ನೆನಪಾಯ್ತು.

ಹತ್ತು ಹನ್ನೆರಡು ಹೆಜ್ಜೆ ವಾಪಾಸ್ ಹೋದ್ರೆ ಮೆಡಿಕಲ್, ಆದ್ರೆ ಅವನು ಆ ನಿರ್ಜನ ರಸ್ತೆನಲ್ಲಿ ತಲೆ ಕೆರ್ಕೊಂಡು ಮತ್ತೆ ಏನೊ ಯೋಚ್ನೆ ಮಾಡ್ತ ನಿಂತ

“ನಾಳೆ ತಂದ್ರಾಯ್ತು”   ಅಂತ ತನಗೆ ತಾನೆ ಹೇಳ್ಕೊಂಡು ಮತ್ತೆ ಮನೆ ಕಡೆ ಹೊರಟ.
ವಿಷಯ ಏನಂದ್ರೆ ಅವನ ಅಮ್ಮ ಮಾತ್ರೆ ಬೇಕು ಅಂತ ಹೇಳಿ ಆಗಲೇ ಮೂರು ದಿವಸ ಆಗಿತ್ತು.

 ‘ಮೆಡಿಕಲ್ ನಲ್ಲಿ ಮಾತ್ರೆ ಇರಲಿಲ್ಲ’   ಅಂತಾನೊ,   ‘ಲೇಟಾಯ್ತು’ ಅಂತಾನೊ ಹೀಗೆ ದಿನಕ್ಕೊಂದು ಉತ್ತರ ಹೇಳಿ ಅಮ್ಮನ ಬಾಯಿ ಮುಚ್ಚಿಸ್ತಿದ್ದ.

ನಿಜವಾಗಿ ಹೇಳಬೇಕು ಅಂದ್ರೆ ಅವನ ಸ್ವಭಾವನೇ ಹಾಗೆ. ಉಡಾಫೆ, ಸೋಮಾರಿತನ, ಮೊಂಡು ಹಠ, ಮೂಗಿನ ತುದಿ ಕೋಪ, ನಾನು ನನ್ನದು ಅನ್ನೊ ಸ್ವಾರ್ಥ. ಈ ‘ನಾನು ನನ್ನುದು’ ಅನ್ನೊ ವ್ಯಾಪ್ತಿಯಲ್ಲಿ ಅವನೊಬ್ಬನೆ ಇರೋದು, ಆ ಸ್ವಾರ್ಥದ ಕೂಪದಲ್ಲಿ ಅವನ ಅಮ್ಮನಿಗೂ ಜಾಗವಿಲ್ಲ. ಹಾಗಂತ ಕೆಟ್ಟವನೂ ಅಲ್ಲ, ಉಡಾಫೆ ಅಂತ ಆಗಲೆ ಹೇಳಿದ್ನಲ್ವ, ಖುಷಿಯಲ್ಲಿದ್ದಾಗ ಅಮ್ಮ- ಮನೆ ಅಂತ ಎಲ್ಲಾ ಓಡಾಡ್ತಾನೆ, ಇಲ್ಲಾಂದ್ರೆ ಏನೇನು ಇಲ್ಲ….

ಅಲ್ಲಿ ಬೀದಿ ದೀಪ ಬಿಟ್ಟರೆ ಅವನಿಗೆ ಬೇರೆಯಾವ ದಾರಿದೀಪವೂ ಇರಲಿಲ್ಲ, ಏಳು ಗಂಟೆಗೆಲ್ಲಾ ಮೋಡ ಮುತ್ತಿಕೊಂಡು ಪೂರ್ತಿ ಕತ್ತಲಾಗಿತ್ತು. ಬೀದಿ ನಾಯಿಗಳು ಬಿಟ್ಟರೆ ಅವನ ಸಂಗಡಿಗರು ಯಾರು ಜೊತೆಗೆ ಇರಲಿಲ್ಲ. ಗೊತ್ತಿರೋ ದಾರಿಯಾಗಿದ್ರಿಂದ ತನ್ನ ಪಾಡಿಗೆ ತಾನು ಏನೊಯೊಚಿಸ್ತಾ ಹೋಗ್ತಾ ಇದ್ದವನಿಗೆ ಎಲ್ಲೊ ದೂರದಲ್ಲಿ ಎಸ್ಟೇಟ್ ಮಧ್ಯೆ ಚಕ್ ಅಂತ ಯಾವುದೋ ಬೆಳಕು ಬಂದು ಹೋದಹಾಗಾಯ್ತು, ಸ್ವಲ್ಪ ಹೊತ್ತು ಅಲ್ಲೆ ನಿಂತ, ಹಾಗೆ ಹಿಂದೆ ತಿರುಗಿ ಅವನು ಬಂದ ದಾರಿಯನ್ನೇ ನೋಡಿದ ದೂರದಲ್ಲಿ ಬೀದಿದೀಪ ಬಿಟ್ಟರೆ ಮತ್ತೇನು ಕಾಣಿಸಲಿಲ್ಲ, ಮತ್ತೆ ಬೆಳಕು ಬಂದ ಕಡೆ ನೋಡಿದ ಅಲ್ಲಿ ಏನು ಕಾಣಿಸ್ಲಿಲ್ಲ. ಏನೊ ಭ್ರಮೆ ಅಂತ ತನಗೆ ತಾನೆ ಹೇಳ್ಕೊಂಡು ಮತ್ತೆ ಮುಂದೆ ಹೋದ, ಸ್ವಲ್ಪ ಹೊತ್ತಲ್ಲಿ ಮತ್ತೊಮ್ಮೆ ಆ ಬೆಳಕು ಮಿಂಚಿ ಮಾಯವಾಯ್ತು, ವೇಗವಾಗಿ ಬೀಸೊ ಚಳಿಗಾಳಿಯ ಉಊಊ… ಅನ್ನೋ ಶಬ್ದ ಬಿಟ್ಟರೆ ಮತ್ಯಾವ ಶಬ್ದವೂ ಅಲ್ಲಿರಲಿಲ್ಲ, ಆ ಚಳಿಯಲ್ಲು ಅವನ ಮುಖ ಒದ್ದೆಯಾಗೋಕೆ ಶುರುವಾಯಿತು. ಆದರೂ ಧೈರ್ಯಮಾಡಿ ಆ ಬೆಳಕು ಬಂದ ಕಡೆಗೆ ನೋಡುತ್ತ ಮುಂದೆ ಹೆಜ್ಜೆ ಇಟ್ಟ, ಚಿಕ್ಕವನಿದ್ದಾಗ ಅವನ ಅಜ್ಜ ಹೇಳ್ತಿದ್ದ ಕೊಳ್ಳಿದೆವ್ವದ ಕಥೆಗಳೆಲ್ಲ ನೆನಪಾಗ್ತಾ ಇದ್ದ ಹಾಗೆ ಅವನ ನಡಿಗೆಯ ವೇಗ ಕೂಡ ಹೆಚ್ಚಾಗುತ್ತಾ ಹೋಯ್ತು, ಹಾಗೆ ಮುಂದೆ ಹೋಗ್ತಾ ಇದ್ದವನ ಕಣ್ಣಿಗೆ ಮತ್ತೆ ಆ ಬೆಳಕು ಕಾಣಿಸಿಕೊಳ್ತು.

ಮತ್ತೆ ಮಾರ್ಗ ಮಧ್ಯೆ ನಿಂತವನಿಗೆ ಮನಸ್ಸು ನಿರಾಳವಾಗಿ ದೀರ್ಘವಾದ ನಿಟ್ಟುಸಿರು ಬಿಟ್ಟ. ದೂರದ ಎಸ್ಟೇಟ್ ಮಧ್ಯದಲ್ಲಿ ಯಾವುದೋ ಬೀದಿ ದೀಪ ಹಾಳಗಿದ್ದರಿಂದ ಅವಗವಾಗ ಹೊತ್ತಿಕೊಂಡು ಮಾಯವಾಗ್ತಿತ್ತು, ಮರಗಳ ನಡುವೆ ಅಸ್ಪಷ್ಟವಾದ ಬೆಳಕು ಬೀದಿದೀಪ ಅಂತ ಗ್ರಹಿಸುವ ಮೊದಲೆ ಸಣ್ಣಗೆ ನಡುಗಿ ಹೋಗಿದ್ದ . ಬೆವರಿ ಒದ್ದೆಯಾಗಿದ್ದ ಚಕ್ರಪಾಣಿಯ ಮೈಗೆ, ಬೀಸುತ್ತಿದ್ದ ಥಂಡಿ ಗಾಳಿಯಿಂದ ಸಾಮಾನ್ಯಕ್ಕಿಂತ ಜಾಸ್ತಿಯಾಗೆ ಚಳಿಯ ಅನುಭವವಾಯ್ತು, ಮನಸ್ಸು ಸ್ವಲ್ಪ ಹಗುರಾಯ್ತು. ಒಣಗಿದ ಗಂಟಲಿಗೆ ನೀರು ಕುಡಿಬೇಕು ಅಂತ ತನ್ನ ಬ್ಯಾಗ್ ನಿಂದ ಬಿಸಿನೀರಿನ ಬಾಟಲ್ ತೆಗೆದು ನೀರು ಕುಡಿಯೋಕೆ ಶುರು ಮಾಡಿದ. ನೀರು ಕುಡಿತ ಬಲಭಾಗಕ್ಕೆ ತಿರುಗಿದಾಗಲೆ ಗೊತ್ತಾಗಿದ್ದು ಇಷ್ಟು ಹೊತ್ತು ತಾನು ಎಲ್ಲಿ ನಿಂತಿದ್ದೆ ಅಂತ. ಅವನು ನಿಂತಿದ್ದ ರಸ್ತೆ ಬಲಭಾಗದಲ್ಲಿ ಒಂದು ಹಳೆ ಪಾಳುಬಿದ್ದ ಮನೆಯಿತ್ತು. ಸುಮಾರು ವರ್ಷಗಳಿಂದ ಅಲ್ಲಿ ಯಾರು ವಾಸವಾಗಿರ್ಲಿಲ್ಲ, ಆ ಮನೆ ದರೋಡೆಯಾಗಿ ಅಲ್ಲಿ ಒಂದು ಹೆಂಗಸಿನ ಕೊಲೆಯಾಗಿತ್ತು ಅನ್ನೊದು ಮಾತ್ರ ಇವನಿಗೆ ಗೊತ್ತು.

ಮನೆ ಮುಂದೆ ಗೇಟಿಗೆ ಬೀಗ ಹಾಕಿತ್ತು. ಮನೆ ಮುಂದಿನ ಎರಡು ಬಾಗಿಲಿನಲ್ಲಿ ಒಂದು ಮುಚ್ಚಿತ್ತು, ಇನ್ನೊಂದು ಮುರಿದು ಬಿದ್ದಿತ್ತು. ಬಾಗಿಲಿನ ಮೇಲೆ ಒಂದು ಲೈಟ್ ನೇತುಹಾಕಿದ್ರು. ನೀರು ಕುಡಿದು ಬಾಟಲ್ ನ ಬ್ಯಾಗ್ ನಲ್ಲಿಟ್ಟು ಕರ್ಚೀಫ್ ತೆಗೆದು ಮುಖ ಒರೆಸಿಕೊಳ್ತಾ ಇದ್ದ, ದೂರದ ತಾತಯ್ಯನ ಗುಡ್ಡದ ಕಡೆಯಿಂದ ಊಊಊಂ… ಅಂತ ಪ್ರಾಣಿ ಊಳಿಡೊದು ಕೇಳಿಸ್ತು, ಅದು ನಾಯಿನೋ ತೋಳಾನೊ ಅಂತ ಯೋಚಿಸ್ತ ಬ್ಯಾಗ್ ನಿಂದ ಟಾರ್ಚ್ ಹೊರತೆಗೆದು ಅಲ್ಲಿಂದ ಹೊರಡೊ ಮನಸು ಮಾಡಿದ, ಇದ್ದಕಿದ್ದ ಹಾಗೆ ಅವನ ಬೆನ್ನ ಹಿಂದೇನೆ ಊಊಊಂ… ಅಂತ ನಾಯಿ ಜೋರಾಗಿ ಊಳಿಡೊಕೆ ಶುರುಮಾಡಿತು, ಅಚಾನಕ್ ಆಗಿ ಬಂದ ಕೂಗಿನಿಂದ ಬೆಚ್ಚಿ ಬಿದ್ದವನು ತಿರುಗಿ ನೋಡಿದ, ಇವನನ್ನ ನೋಡಿ ಕೂಗು ನಿಲ್ಲಿಸಿದ ನಾಯಿ ಬಾಲ ಅಲ್ಲಾಡಿಸೊಕೆ ಶುರು ಮಾಡಿತು, ನಾಯಿ ಇದ್ದ ಕಡೆ ಟಾರ್ಚ್ ಬೆಳಕು ಬಿಟ್ಟು ಒಂದು ಕಲ್ಲು ತೆಗೊಂಡು ನಾಯಿ ಇದ್ದ ಕಡೆ ಬೀಸಿದ.

ನಾಯಿ ಕುಯ್ಂ… ಅಂತ ಶಬ್ದ ಮಾಡಿಕೊಂಡು ಅಲ್ಲಿಂದ ಕತ್ತಲಲ್ಲಿ ಮರೆಯಾಯಿಯ್ತು, ಅದೇ ಹೊತ್ತಿನಲ್ಲಿ ಆ ಪಾಳು ಮನೆ ಹತ್ರ ಏನೋ ಜೋರಾಗಿ ಶಬ್ದ ಆಯ್ತು, ಬಾಗಿಲ ಮೇಲೆ ತೂಗು ಹಾಕಿದ್ದ ಲೈಟ್ ಆ ಕಡೆಯಿಂದ ಈ ಕಡೆ- ಈ ಕಡೆಯಿಂದ ಆ ಕಡೆ ಅಲುಗಾಡುತಿತ್ತು, ಮುಚ್ಚಿಕೊಂಡಿದ್ದ ಬಾಗಿಲು ಯಾರೊ ಜೋರಾಗಿ ತಳ್ಳಿದ ಹಾಗೆ ತೆರೆದುಕೊಂಡು ಅದೇ ವೇಗದಲ್ಲಿ ವಾಪಸ್ ಬಂದು ಮುಚ್ಚಿಕೊಳ್ತು. ಈಗ ತಾನೆ ಕೊಳ್ಳಿ ದೆವ್ವದ ರಹಸ್ಯವನ್ನ ಭೇದಿಸಿದ್ದ ಚಕ್ರಪಾಣಿಗೆ ಮತ್ತೆ ನಡುಕ ಶುರುವಾಯ್ತು, ಭಯದಲ್ಲಿ ಆ ಕಡೆ ಈ ಕಡೆ ನೋಡಿದವನಿಗೆ ಯಾರು ಕಾಣಿಸಲಿಲ್ಲ, ಉಸಿರಿನ ವೇಗ ಜೋರಾಯ್ತು, ಕೈಯಲ್ಲಿ ಮುಖದ ಬೆವರನ್ನ ಒರೆಸಿಕೊಳ್ಳೊದಿಕ್ಕೆ ಶುರು ಮಾಡಿದ. ಮತ್ತೆ ಮೌನ… ಅವನ ಎದೆ ಬಡಿತವೇ ಅವನಿಗೆ ಸ್ಪಷ್ಟವಾಗಿ ಕೇಳಿಸುವಷ್ಟು ಮೌನ, ಮತ್ತೆ ತಾತಯ್ಯನ ಗುಡ್ಡದಿಂದ ಊಳಿಡುವ ಶಬ್ದ. ಒಂದ ಸೆಕುಂಡು ಕೂಡ ತಡ ಮಾಡದೆ ಅಲ್ಲಿಂದ ವೇಗವಾಗಿ ಓಡೊಕೆ ಶುರು ಹಚ್ಚಿಕೊಂಡ.

ದಾರಿ ಮಧ್ಯೆ ಇದ್ದ ದಾರಿ ದೀಪ ಕೈ ಕೊಟ್ಟಿದ್ದರಿಂದ ಕತ್ತಲಲ್ಲೆ ಸ್ವಲ್ಪ ದೂರ ಓಡಿದ, ದೂರದಲ್ಲಿ ಎಲ್ಲೋ ಟಾರ್ಚ್ ಬೆಳಕು ಕಾಣಿಸಿತು. ಅವಾಗಲೇ ನೆನಪಾಗಿದ್ದು ಅವನ ಕೈಯಲ್ಲಿ ಟಾರ್ಚ್ ಇದೆ ಅಂತ. ಓಡೊದನ್ನ ನಿಲ್ಲಿಸಿ ಏದುಸಿರು ಬಿಟ್ಟಿಕೊಂಡು ನಿಧಾನಕ್ಕೆ ನಡೆಯೋದಕ್ಕೆ ಶುರುಮಾಡಿದ. ಹತ್ತಿರದ ಎಸ್ಟೇಟ್ ಕೆಲಸಗಾರರು ಎದುರುಗಡೆಯಿಂದ ಬರ್ತಾ ಇದ್ರು, ಅವರದೇ ಆ ಟಾರ್ಚ್ ಬೆಳಕು. ಇವನಿಗೆ ಸ್ವಲ್ಪ ಸಮಾಧಾನವಾಯ್ತು. ಮುಂದೆ ಮತ್ತೆ ಒಂದೇ ಒಂದು ಸ್ಟ್ರೀಟ್ ಲೈಟ್ ಇದೆ, ಅದರ ಪಕ್ಕದಲ್ಲೆ ಅವನ ಮನೆ.

ಹೇಗೊ ಮನೆ ಸೇರ್ಕೊಂಡ,… ಯಾವಾಗಲೂ ಅವನು ಗೇಟ್ ತೆರೆಯೋ ಶಬ್ದ ಕೇಳಿ ಅವನು, ಗೇಟಿಂದ ಮನೆ ಬಾಗಿಲಿಗೆ ಹೋಗೋ ಹೊತ್ತಿಗೆ ಅವನ ಅಮ್ಮ ಬಾಗಿಲು ತೆಗಿತಿದ್ರು. ಆದ್ರೆ ಇವತ್ತು ಬಾಗಿಲಿನ ಹತ್ರ ಹೋದರು ಬಾಗಿಲು ತೆಗಿಲೇ ಇಲ್ಲ. ಓಡೊಡಿ ಸುಸ್ತಾಗಿದ್ದ ಇವನಿಗೆ ಜೋರಾಗಿ ಅಮ್ಮನನ್ನ ಕೂಗೊ ಶಕ್ತಿಯೂ ಇರಲಿಲ್ಲ. ಬಾಗಿಲು ಬಡಿದ, ಒಳಗಡೆಯಿಂದ

“ಬಂದೇ……..” ಅನ್ನೊ ಕೂಗು ಕೇಳಿಸ್ತು. ಸ್ವಲ್ಪ ಹೊತ್ತಿನ ನಂತರ ಅವನ ಅಮ್ಮ ಬಂದು ಬಾಗಿಲು ತೆಗೆದ್ರು, ಬೆವತು ಬೆಂಡಾಗಿದ್ದ ಅವನ ಮುಖವನ್ನ ನೋಡಿ

“ಏನೋ ಪಾಣಿ…. ಇಷ್ಟೊಂದು ಬೆವತು ಕೊಂಡಿದಿಯ???? ಓಡಿ ಕೊಂಡು ಬಂದ್ಯ????”  ಅಂತ ಕೇಳಿದ್ರು. ಬಲಕೈಯಲ್ಲಿ ಸೊಂಟ ಹಿಡಿದುಕೊಂಡಿದ್ದ ಅವರು ಕೂಡ ಸುಸ್ತಾಗಿದ್ದ ಹಾಗೆ ಕಾಣಿಸ್ತು.

“ಬಾಗಿಲು ತೆಗೆಯೋಕೆ ಯಾಕೆ ಇಷ್ಟು ಲೇಟು????”  ಉತ್ತರನ ಪೌರುಷ ಒಲೆ ಮುಂದೆ ಅನ್ನೋ ಹಾಗೆ, ಜೀವ ಕೈಯಲ್ಲಿ ಹೀಡ್ಕೊಂಡು ಭಯದಲ್ಲಿ ಓಡಿ ಬಂದಿದ್ದ ಅವನು, ಇಲ್ಲಿ ಬಂದವನೆ ಅಮ್ಮನನ್ನ ಗದರಿಸೋ ಹಾಗೆ ಮಾತನಾಡೊಕೆ ಶುರು ಮಾಡಿದ.

“ಸಂಜೆಯಿಂದ ಹಾಳಾದ್ದು ಈ ಸೊಂಟ ನೋವು ಜಾಸ್ತಿ ಆಗಿದೆ ಕಣೊ, ಕೂತ್ರೆ ಬೇಗ ಎಳೊಕೆ ಆಗೊಲ್ಲ, ಅದಿಕ್ಕೆ ತಡ ಆಯ್ತು….. ಅದ್ಸರಿ ಇದ್ಯಾಕೆ ಇಷ್ಟು ಬೆವೆತು ಕೊಂಡಿದ್ಯ????”

“ಸ್ವಲ್ಪ ಜ್ವರ ಇದ್ದಹಾಗಿತ್ತು, ಇನ್ನು ರಾತ್ರಿ ಜೋರಾಗೋದು ಬೇಡ ಅಂತ ಬರೋವಾಗ್ಲೆ ಮಾತ್ರೆ ತೆಗೊಂಡೆ…. ಪವರ್ ಜಾಸ್ತಿ ಇತ್ತು ಅನ್ಸುತ್ತೆ, ಅದಿಕ್ಕೆ ಸ್ವಲ್ಪ ಸುಸ್ತಾಗಿ ಬೆವರ್ತಾ ಇದೆ ಅಷ್ಟೆ” ಅಂತ ಹೇಳಿ ಅಲ್ಲೆ ಇದ್ದ ಕುರ್ಚಿ ಮೇಲೆ ಕೂತು ಬೆವರು ಒರೆಸಿಕೊಳ್ಳೊದಿಕ್ಕೆ ಶುರು ಮಾಡಿದ.

“ ಎಷ್ಟು ಸರ್ತಿ ಹೇಳಿದಿನಿ ಬರೀ ಹೊಟ್ಟೆಗೆ ಮಾತ್ರೆ ತಿನ್ಬೇಡ ಅಂತ???? ಕೇಳೊದೆ ಇಲ್ಲ….” ಅಂತ ನಿಧಾನಕ್ಕೆ ಅವನ ಹತ್ತಿರ ಬಂದು ಜ್ವರ ಇದ್ಯಾ ಅಂತ  ಅವನ ಹಣೆ ಮೇಲೆ ಕೈ ಇಟ್ಟು “ ಸ್ವಲ್ಪ ಜ್ವರ ಇರೋ ಹಾಗಿದೆ” ಅಂದ್ರು.

“ಸರಿ ನಾನು ಮುಖ ತೊಳ್ಕೊಂಡು ಬರ್ತೀನಿ…. ಊಟಕ್ಕೆ ರೆಡಿ ಮಾಡು… ಸುಸ್ತಾಗಿದೆ ಇವತ್ತು ಬೇಗ ಮಲಗ್ತೀನಿ” ಅಂತ ಬಚ್ಚಲು ಮನೆ ಕಡೆ ಹೊರಟ

“ಸೊಂಟ ನೋವಿನ ಮಾತ್ರೆ ತಾರೊ… ಅಂತ ಹೇಳಿದ್ದೆ ತಂದ್ಯೆನೊ????”

“ಇಲ್ಲ ಅಮ್ಮ…. ಅದೂ…. ಟೆನ್ಷನ್ ನಲ್ಲಿ ಮರ್ತು ಬಿಟ್ಟೆ…. ನಾಳೆ ತರೋಣ ಬಿಡು” ಅಂತ ಅಲ್ಲಿಂದ ತಲೆ ತಗ್ಗಿಸಿಕೊಂಡು ಹೊರಟುಹೋದ

“ಏನು ಹುಡುಗಾನೊ” ಅಂತ ಸೊಂಟದ ಮೇಲೆ ಕೈ ಇಟ್ಟುಕೊಂಡು ಬೆನ್ನು ಬಗ್ಗಿಸುತ್ತಾ ಬೇಸರಮಾಡಿಕೊಂಡು ಅಡುಗೆ ಮನೆ ಕಡೆ ಹೋದ್ರು.

***

ಚಕ್ರಪಾಣಿಗೆ ಊಟ ಬಡಿಸುತ್ತಾ ತಾಯಿ ಪಕ್ಕದಲ್ಲೇ ಕೂತಿದ್ರು, ಮುಖ ಗಂಟು ಹಾಕಿಕೊಂಡು ಅವನು ಊಟ ಮಾಡ್ತಿದ್ದ.

“ನಾಳೆನಾದ್ರು ಮಾತ್ರೆ ಮರೀದೆ ತೆಗೊಂಡು ಬಾ.”

“ನಾಳೆ ತಂದ್ರಾಯ್ತು ಬಿಡು… ಇಲ್ಲಾಂದ್ರೆ ಆ ಮಾತ್ರೆನೆಲ್ಲ ತಿನ್ನೋದು ಬಿಟ್ಟು ವಾಕಿಂಗು, ಇಲ್ಲ ಸಣ್ಣ ಪುಟ್ಟ ವ್ಯಾಯಾಮ ಇದ್ರೆ ಮಾಡು… ಜಾಸ್ತಿ ಮಾತ್ರೆ ತಿಂದರೆ ಅದೂ ಒಳ್ಳೆದಲ್ಲ”

“ಹೌದಪ್ಪ ಅದೊಂದು ಬಾಕಿ ಇತ್ತು…. ಇಡೀ ದಿನ ಕತ್ತೆತರ ದುಡಿದಿದ್ದಕ್ಕೆ ಇಲ್ಲಿ ಸೊಂಟ ಬಿದ್ದು ಹೋಗಿದೆ…. ಈ ವಯಸ್ಸಲ್ಲಿ ಅದನ್ನೂ ಮಾಡ್ತೀನಿ….”

ಚಕ್ರಪಾಣಿ ಸುಮ್ಮನೆ ಊಟ ಮಾಡ್ತಾ ಇದ್ದ.

“ಜ್ವರಕ್ಕೆ ಮಾತ್ರೆ ತಿಂದೆ ಅಂದ್ಯಲ್ವ… ಮಾತ್ರೆ ಎಲ್ಲಿಂದ ತೆಗೊಂಡೆ???? ಮೆಡಿಕಲ್ ಹೋಗಿದ್ಯ????”

“ಅದೂ….” ಅಂತ ತಡವರಿಸೋಕು ಶುರು ಮಾಡಿದ  “ ಇಲ್ಲ ನನ್ನ ಫ್ರೆಂಡು…. ಅವನ ಬ್ಯಾಗ್ ನಲ್ಲಿ ಇಟ್ಕೊಂಡಿರ್ತಾನೆ ಅದನ್ನ ಕೊಟ್ಟ”

“ಹಾಗ….. ಮತ್ತೆ ವಿಕ್ಸ್ ಕೂಡ ಇರುತ್ತಾ ಅವನ ಹತ್ರ ಇರುತ್ತಾ???”  ಪಾಣಿ ಏನು ಮಾತಾಡ್ಲಿಲ್ಲ…..

“ಮಜ್ಜಿಗೆ ಕೊಡು….” ಅಂತ ಮಾತು ಮರೆಸೋಕೆ ನೋಡಿದ, ಮಜ್ಜಿಗೆ ಪಾತ್ರೆ ಮುಂದೆ ಇಡ್ತಾ ಅಮ್ಮ ಮತ್ತೆ ಮಾತಿಗೆಳ್ದ್ರು

“ನೀನು ಬಿಚ್ಚಿಟ್ಟಿದ್ದ ಪ್ಯಾಂಟ್ ನಲ್ಲಿ ಈ ಕವರ್ ಸಿಕ್ತು…. ಇದರ ಮೇಲೆ ‘ಸನ್ನಿಧಿ ಮೆಡಿಕಲ್ಸ್’ ಅಂತ ಹೆಸ್ರಿದೆ, ಇದರ ಒಳಗಡೆ ಒಂದೆರಡು ಮಾತ್ರೆ, ವಿಕ್ಸ್ ಎಲ್ಲಾ ಇದೆ, ನೀನು ಇವತ್ತು ಮೆಡಿಕಲ್ ಗೆ ಹೋಗಿದ್ದೆ ಅಲ್ವ????”

“ನಾನು ಊಟ ಮಾಡೊದು ನಿಂಗೆ ಇಷ್ಟ ಇಲ್ವ??? ದುಡಿದು ಸುಸ್ತಾಗಿ ಬಂದ್ರೆ ನೆಮ್ಮಯಾಗಿ ಇರೋಕು ಬಿಡಲ್ಲ…” ಅಂತ ಜೋರಾಗಿ ತಟ್ಟೆ ತಳ್ಳಿಬಿಟ್ಟ.

“ಗೊತ್ತು ಬಿಡು… ಈ ಥರ ತಟ್ಟೆ ತಳ್ಳೊದನ್ನ ತುಂಬಾ ಸಿನೆಮಾದಲ್ಲಿ ನಾನು ನೋಡಿದಿನಿ …. ಮೊದಲಿನ ಥರ ಆಗಿದ್ರೆ ನಿನ್ನನ್ಯಾರು ದಮ್ಮಯ್ಯ ಹಾಕ್ತಿದ್ರು ಮಾತ್ರೆ ತಂದುಕೊಡು ಅಂತ???? ಆರೋಗ್ಯ ಸರಿ ಇಲ್ಲ ಅಂತ ಮಾತ್ರೆ ತಂದು ಕೊಡು ಅಂದ್ರೆ ವ್ಯಾಯಾಮ, ವಾಕಿಂಗ್ ಅಂತ ಬಿಟ್ಟಿ ಸಲಹೆ ಅಲ್ವ”  ಅಂದಾಗ ಅಮ್ಮನ ಕಣ್ಣಲ್ಲಿ ನೀರು ತುಂಬಿಕೊಳ್ತು. ಅವನು ತಳ್ಳಿದ ತಟ್ಟೆಯನ್ನ ಕಷ್ಟಪಟ್ಟು ಎತ್ತಿಕೊಂಡ್ರು.

ಅಲ್ಲಿಂದ ನೇರವಾಗಿ ತನ್ನ ರೂಂ ಗೆ ಬಂದ ಪಾಣಿ ಮಂಚದ ಮೇಲೆ ಕೂತು ಬಿಟ್ಟ. ಅಡುಗೆ ಮನೆಯಿಂದ ಮತ್ತೆ ಅಮ್ಮ ಏನೊ ಹೇಳೋದು ಕೇಳಿಸ್ತು

“ನಾನೇನು ದಾರಿಯಲ್ಲಿ ಹೋಗೊರನ್ನ ಕೇಳಿದ್ನ ಮಾತ್ರೆ ಬೇಕು ಅಂತ, ಮೂರುದಿವಸದಿಂದ ನೆಟ್ಟಗೆ ನಿಂತು ಕೆಲಸ ಮಾಡೊಕಾಗ್ತಿಲ್ಲ… ನನಗಾಗ್ತಾ ಇರೋ ನೋವು ಯಾರತ್ರ ಹೇಳಲಿ…..ಯಾರಿಗ್ ಗೊತ್ತು ಸಾಯೋ ಈ ಮುದುಕಿ ಮಾತ್ರೆಗೆ ದುಡ್ಡು ಯಾಕೆ ಖರ್ಚು ಮಾಡೊದು ವ್ಯರ್ಥ ಅಂತ ಅನಿಸಿರಬೇಕು….., ಇಲ್ಲಾಂದ್ರೆ ಮೂರು ದಿವಸ ದಿನಕ್ಕೊಂದು ಸುಳ್ಳು ಕಾರಣ ಇರ್ತಿತ್ತ???” ಅಂತ ಅಳುತ್ತಾ ಮಾತನಾಡೊ ಜೊತೆಗೆ  ಪಾತ್ರೆಯನ್ನ ನೆಲಕ್ಕೆ ಕುಕ್ಕೊ ಶಬ್ದಾನು ಕೇಳಿಸ್ತಿತ್ತು.

ಪಾಣಿ ತಲೆದಿಂಬಿಗೆ ಹಾಗೆ ಸ್ವಲ್ಪ ಒರಗಿಕೊಂಡು “ಛೆ….. ತಪ್ಪು ಮಾಡ್ಬಿಟ್ಟೆ…. ನೆನಪಾದ ಕೂಡಲೆ, ವಾಪಸ್ ಮೆಡಿಕಲ್ ಗೆ ಹೋಗ್ತಿದ್ರೆ ಐದೆ ನಿಮಿಷದ ಕೆಲಸ…. ನನ್ನ ಬುದ್ದಿಯಿಂದ ಅಮ್ಮನಿಗೆ ಪ್ರಾಬ್ಲಮ್…. ಈಗಲೇ ಪೇಟೆಗೆ ಹೋಗಿ ಬರೋಣ ಅಂದ್ರೆ ನಾನು ಹೋಗೊ ಹೊತ್ತಿಗೆ ಕ್ಲೋಸ್ ಆಗಿರುತ್ತೆ”  ಅಂತ ಯೋಚನೆ ಮಾಡ್ತಾ ಕೂತ. ಅವನ ಕೋಣೆಯ ಕಿಟಲಿ ಬಾಗಿಲು ಡಬ್ ಅಂತ ಕಿಟಕಿಗೆ ಬಂದು ಬಡೀತು. ಸೀದ ಎದ್ದವನೇ ಕಿಟಕಿ ಬಾಗಿಲು ಹಾಕೊದಿಕ್ಕೆ ಹೋದ ಹೊರಗಡೆ ಗಾಳಿ ರಭಸ ಜೋರಿತ್ತು. ಬಾನಂಗಳದಲ್ಲಿ ಮಿಂಚು, ದೂರದಲ್ಲೆಲ್ಲೊ ಗುಡುಗಿನ ಸದ್ದು, ಮಳೆ ಬರೋಹಾಗಿತ್ತು. ದೂರದಲ್ಲಿ ಕಾಣ್ತಾ ಇದ್ದ ಬೀದಿ ದೀಪ ನೋಡಿದವನಿಗೆ ಆ ಪಾಳು ಮನೆ, ತೂಗಾಡೊಕೆ ಶುರುಮಾಡಿದ ಲೈಟು, ಊಳಿಟ್ಟ ನಾಯಿ….. ಎಲ್ಲವೂ ಅವನ ಕಣ್ಣ ಮುಂದೆ ಹಾದು ಹೋಯ್ತು. ವೇಗವಾಗಿ ಕಿಟಕಿ ಮುಚ್ಚಿದವನೇ ಮತ್ತೆ ಮಲಗೋ ಮಂಚದ ಹತ್ರ ಬಂದ.  ಒಳಗಡೆಯಿಂದ ಪಾತ್ರೆ ತೊಳೆಯೊದು, ಪಾತ್ರೆ ಕುಕ್ಕೊದು ಶಬ್ದ ಕೇಳ್ತಾನೆ ಇತ್ತು. ಮತ್ತೆ ದಿಂಬಿಗೆ ತಲೆ ಕೊಟ್ಟು ಕಣ್ಣು ಮುಚ್ಚಿಕೊಂಡ.

***

ಬಿರುಗಾಳಿ ಹಾಗೆ ಬೀಸುತ್ತಿದ್ದ ಆ ವೇಗವಾದ ಗಾಳಿಯ ಮಧ್ಯೆ ಚಕ್ರಪಾಣಿ ಆ ನಡುರಾತ್ರಿಯಲ್ಲಿ ಒಬ್ಬನೇ ನಿಂತಿದ್ದ, ಕೈಯಲ್ಲಿ ಒಂದು ಟಾರ್ಚ್, ಬೀಸೋ ಗಾಳಿಗೆ ಅವನ ತಲೆಗೂದಲೆಲ್ಲ ಕೆದರಿ ಹೋಗಿತ್ತು, ಕಣ್ಣಿಗೆ ಧೂಳು ತರಗೆಲೆಗಳು ಬೀಳದೇ ಇರೋ ಹಾಗೆ ಕೈ ಅಡ್ಡ ಹಿಡ್ಕೊಂಡು ಆ ಪಾಳುಮನೆಯ ಗೇಟ್ ತೆಕ್ಕೊಂಡು ಒಳಗಡೆ ಹೋಗ್ತಾನೆ. ಗುಡುಗು, ಮಿಂಚು ಬರ್ತಾ ಇದ್ದದ್ದು ನೋಡಿದ್ರೆ ಯಾವ ಕ್ಷಣದಲ್ಲಾದ್ರು ಮಳೆ ಬರೋಹಾಗಿತ್ತು. ಇದ್ಯಾವುದೂ ಲೆಕ್ಕಕ್ಕೆ ಇಲ್ಲಾ ಅನ್ನೋ ಹಾಗೆ ಅವನು ಮತ್ತೆ ಆ ಒಂಟಿ ಬಾಗಿಲು ಇರೋ ಪಾಳುಮನೆ ಹತ್ರ ನಡಿತಾನೆ. ಸಂಜೆ ಮನೆಗೆ ಹೋಗುವಾಗ ಇದ್ದಕಿದ್ದಹಾಗೆ ತೂಗಾಡೋಕೆ ಶುರುವಾಗಿದ್ದ ಆ ಬಾಗಿಲಿನ ಮೇಲಿನ ಲೈಟ್ ಇನ್ನೂ ತೂಗಾಡ್ತಾ ಇತ್ತು. ಒಂದು ಬಾಗಿಲು ಮುರಿದು ಬಿದ್ದಿತ್ತು, ಇನ್ನೊಂದು ಬಾಗಿಲನ್ನ ಒಳಗಡೆ ತೆರೆದುಕೊಂಡು ‘ಪಾಣಿ’ ಮುಂದೆ ಹೋಗ್ತಾನೆ.

ಒಳಗಡೆ ಬರೀ ಕತ್ತಲು, ಟಾರ್ಚ್ ನ ಬೆಳಕಿನಲ್ಲಿ ಅವನಿಗೆ ಕಾಣಿಸಿದ್ದು ಮುರಿದು ಬಿದ್ದಿರೋ ಹಳೆಯ ಮೇಜು, ಕುರ್ಚಿ, ಧೂಳು, ಸುತ್ತಾ ಹರಡಿಕೊಂಡಿರೂ ಜೇಡರಬಲೆ. ಇದರ ನಡುವೆ ಯಾವುದೋ ಒಂದು ಹೆಂಗಸು ನೋವಿನಿಂದ ಕೊರಗೋ ಶಬ್ದ ಕೇಳಿಸ್ತಿತ್ತು. ಆ ಶಬ್ದ ಬಂದ ಕಡೆಗೆ ಇವನು ಮುಂದುವರೀತಾನೆ, ಎಡಭಾಗದ ಒಂದ ಕೋಣೆಯಿಂದ ಆ ಕೂಗು ಕೇಳ್ತಾ ಇತ್ತು. ಇವನು ಆ ರೂಂ ಹತ್ರ ಹೋಗ್ತಾನೆ. ಆದರೆ ಆ ಕೋಣೆ ಬಾಗಿಲಲ್ಲಿ ಧೂಳಾಗಲಿ, ಜೇಡರ ಬಲೆಯಾಗಲಿ ಇರಲಿಲ್ಲ, ನಿಧಾನಕ್ಕೆ ಆ ಬಾಗಿಲು ತೆರೀತಾನೆ, ಕೋಣೆಯ ಒಳಗಡೆ ಎಲ್ಲವೂ ಸರಿಯಾಗಿದೆ ಮೇಜು, ಕುರ್ಚಿ ಮಂಚ ಆ ಮಂಚದ ಪಕ್ಕದಲ್ಲಿ ಉರಿತಾ ಇರೋ ಎಣ್ಣೆ ದೀಪ. ಆ ಮಂಚದಲ್ಲಿ ಒಂದು ಹೆಂಗಸು ಮಲಗಿದಾಳೆ, ಅವಳು ನೋವಿಂದ ನರಳಾಡ್ತಾ ಆ ಕಡೆ ಈ ಕಡೆ ಹೊರಳಾಡ್ತಾ ಇದ್ಲು. ಇವನು ಮೆಲ್ಲಗೆ ಆ ಹೆಂಗಸಿನ ಹತ್ರ ಹೋಗ್ತಾನೆ. ದೀಪದ ಬೆಳಕಿನಲ್ಲಿ ಅವಳ ಸ್ಪಷ್ಟವಾಗಿ ಕಾಣಿಸುತ್ತೆ. ಆಕೆಯನ್ನ ನೋಡಿದವನೇ

“ಅಮ್ಮಾ….. ನೀನು ಇಲ್ಲಿ..????” ಅಂತ ಮಂಚದ ಹತ್ರ ಹೋಗ್ತಾನೆ, ಅವನ ನಾಲಗೆ ಒಣಗೋಕೆ ಶುರುವಾಯ್ತು. ಮಂಚದ ಪಕ್ಕದಿಂದ ಇನ್ನೊಂದು ಹೊಸ ಧ್ವನಿ

“ನಮಸ್ಕಾರ ಸರ್……..”

ಚಕ್ರಪಾಣಿ ಕೈಯಲ್ಲಿದ್ದ ಟಾರ್ಚ್ ಬೆಳಕನ್ನ ಯಾರು ಅಂತ ನೋಡೊಕೆ ಆ ಕಡೆ ಬಿಡ್ತಾನೆ, ಅವನ ಮುಖ ಮತ್ತೆ ಬೆವರೋಕೆ ಶುರುವಾಗುತ್ತೆ. ಮಂಚದ ಪಕ್ಕದಲ್ಲಿ ಕೂತಿದ್ದು ಮತ್ಯಾರು ಅಲ್ಲ ದುರ್ಗಾಪರಮೇಶ್ವರಿ ದೇವಸ್ಥಾನದ ಮುಂದೆ ಇದ್ದ ಅದೇ ಹುಚ್ಚ, ಉದ್ದ ಗಡ್ಡ, ಹರಿದಿರೂ ಪ್ಯಾಂಟ್.

ಆ ಹುಚ್ಚ ಮತ್ತೆ ಮಾತು ಮುಂದುವರೆಸಿದ

“ಅಮ್ಮನಿಗೆ ಹುಶಾರಿಲ್ಲ ಅಂತ ಗೊತ್ತಿದ್ರು…… ನಿವ್ಯಾಕೆ ಮಾತ್ರೆ ತಂದು ಕೊಡ್ಲಿಲ್ಲ ಸರ್???..... ಮೆಡಿಕಲ್ ಹತ್ರಾನೆ ಇದ್ದು  ನೀವು ಯಾಕೆ ಮಾತ್ರೆ ತರ್ಲಿಲ್ಲ ಸರ್???”

ಚಕ್ರಪಾಣಿ ಅವನನ್ನ ನೋಡಿ ಹಿಂದೆ ಹಿಂದೆ ಹೋಗ್ತಾ

“ಯಾರು ನೀನು….. ನಮ್ಮಮ್ಮ ಯಾಕೆ ಈ ಪಾಳು ಮನೆಯಲ್ಲಿದ್ದಾಳೆ…. ಇಲ್ಲಿಗೆ ಹೇಗೆ ಬಂದಿದ್ದು” ಅಂತ ತಡವರಿಸಿಕೊಂಡು ಕೇಳೊ ಹೊತ್ತಿಗೆ, ಟಣ್…. ಅಂತ ಮೇಲಿಂದ ಏನೋ ಬಿದ್ದ ಶಬ್ದ ಕೇಳಿಸ್ತು…….

ಮನೆಯಲ್ಲಿ ಮಂಚದ ಮೇಲೆ ಗಾಢ ನಿದ್ದೆಯಲ್ಲಿದ್ದ ಚಕ್ರಪಾಣಿ ಅಚಾನಕ್ ಆಗಿ ಎದ್ದು ಕೂತ, ಅವನು ಹಾಕಿಕೊಂದಿದ್ದ ಬನಿಯನ್ ಅಂತು ಬೆವತು ಬಚ್ಚಲ ಮನೆಯಾಗಿತ್ತು. ಸುತ್ತಲೂ ಕತ್ತಲು, ಒಂದು ಚಿಕ್ಕ ಬೆಳಕಿನ ಕಿಡಿಯೂ ಅವನ ಕಣ್ಣಿಗೆ ಬೀಳದಷ್ಟು ಕತ್ತಲು.  ಆ ಕತ್ತಲಲ್ಲಿ ತಾನು ಎಲ್ಲಿದಿನಿ ಅಂತಾನೆ ಅವನೆ ಗೊತಾಗ್ತಿಲ್ಲ. ಪಕ್ಕದಲ್ಲಿ ಮೇಜಿನ ಮೇಲೆ ಇಟ್ಟುದ ಟಾರ್ಚ್ ಗೆ ಹುಡುಕಾಡಿದ.
ಕೈಗೆ ಟಾರ್ಚ್ ಸಿಕ್ಕ ನಂತರವೇ ಅವನಿಗೆ ನಂಬಿಕೆ ಬಂದಿದ್ದು ತಾನು ಪಾಳುಮನೆ ಓಳಗೆ ಹೋಗಿದ್ದು, ಆ ಹುಚ್ಚ, ಅಮ್ಮ ಎಲ್ಲಾ ಕನಸು ಅಂತ. ಟಾರ್ಚ್ ಬೆಳಕಿನಲ್ಲಿ ನೋಡಿದಾಗ ಒಂದು ಲೋಟ ನೆಲಕ್ಕೆ ಬಿದ್ದು ನೀರು ಚೆಲ್ಲಿರೋದು ಕಾಣಿಸ್ತು, ಆ ಲೋಟದ ಒಳಗಿಂದ ಒಂದು ಹಲ್ಲಿ ಓಡಿ ಹೋಯ್ತು. ಅದೇ ಟಣ್…. ಶಬ್ದಕ್ಕೆ ಅವನ ಕನಸು ಅರ್ಧಕ್ಕೆ ನಿಂತು ಎಚ್ಚರವಾಗಿದ್ದು.

ರಾತ್ರಿ ಅಮ್ಮನ ಹತ್ರ ಜಗಳಮಾಡಿಕೊಂಡು ಮಲಗಬೇಕಾದ್ರೆ ರೂಂ ಲೈಟ್ ಆರಿಸಿರ್ಲಿಲ್ಲ ಅಂತ ನೆನಪ್ಪಯ್ತು. ಅಲ್ಲಿಂದಾನೆ ಲೈಟ್ ಸ್ವಿಚ್ ಇರೋ ಕಡೆ ಟಾರ್ಚ್ ಬೆಳಕು ಬಿಟ್ಟ. ಸ್ವಿಚ್ ಆಫ್ ಆಗಿರ್ಲಿಲ್ಲ ಹಾಗೆ ಇತ್ತು. ಆದರೆ ಕರೆಂಟ್ ಹೋಗಿತ್ತು. ಮೊಬೈಲ್ ತೆಗೆದು ನೋಡಿದವನಿಗೆ ಗಂಟೆ 2:10 ಅಂತ ಗೊತ್ತಾಯ್ತು. ಹಾಳು ಕನಸಿಗೆ ಹೆದರಿ ಮೈಯೆಲ್ಲ ಬಿಸಿಯೇರಿತ್ತು. ನೀರು ಕುಡಿಯೋಕೆ ಅಂತ ಕೋಣೆಯಿಂದ ಹೊರಬಂದು, ಅಡುಗೆ ಮನೆಯತ್ತ ಹೋದ. ಅಡುಗೆ ಮನೆ ಮೂಲೆಯಲ್ಲಿರುವ ದೇವರ ಮನೆ ದೀಪ ಬಿಟ್ಟರೆ ಮತ್ಯಾವ ಬೆಳಕು ಮನೆಯಲ್ಲಿ ಕಾಣಲಿಲ್ಲ. ಗಾಜಿನ ಕಿಟಕಿಯಲ್ಲಿ ಆಗಾಗ ಮಿಂಚು ಮಿಂಚಿ ಮಾಯವಾಗ್ತಾ ಇತ್ತು. ಅಡುಗೆ ಮನೆಯಲ್ಲಿ ನೀರು ಕುಡಿದು ಏದುಸಿರು ಬಿಡ್ತಾ ಗೋಡೆಗೆ ಒರಗಿ ಸುಧಾರಿಸಿಕೊಳ್ತಿದ್ದ. ಇದ್ದಕಿದ್ದ ಹಾಗೆ ಆ ಪಾಳುಮನೆಯಲ್ಲಿ ಕೇಳಿದ ಹೆಂಗಸಿನ ನರಳುವ ದನಿ ಮತ್ತೆ ಇವನ ಮನೆಯಲ್ಲೇ ಕೇಳೊದಕ್ಕೆ ಶುರುವಾಯ್ತು. ಈಗಂತು ಎಷ್ಟು ಹೆದರಿದ ಅಂದರೆ ನೀರು ಮಂಜುಗಡ್ಡೆ ಆಗೋ ಹಾಗೆ ಅವನ ಮೈಯಲ್ಲಿ ರಕ್ತ ಸಂಚಾರ ನಿಂತುಹೋಗಿ ಅದೂ ಕೂಡ ಮಂಜುಗಡ್ಡೆಯ ಹಾಗೆ ಘನೀಕರಿಸ್ತಾ ಇದೆಯೊ ಏನೋ ಅನ್ನುವ ಅನುಭವವಾಯ್ತು.

ಅಡುಗೆ ಮನೆಯಿಂದ ಹೊರಬಂದವನಿಗೆ ಅವನ ತಾಯಿ ಮಲಗೋ ಕೋಣೆಯಿಂದ ನರಳೋ ಶಬ್ದ ಬರೋದು ಕೇಳಿಸ್ತು, ಸೀದ ಆ ಕೋಣೆ ಹತ್ರ ಹೋಗ್ತಾನೆ. ಆ ಬಾಗಿಲನ್ನ ನೋಡುವಾಗ ಅವನ ಭಯ ಮತ್ತೆ ಜಾಸ್ತಿಯಾಗುತ್ತೆ, ಯಾಕಂದ್ರೆ ಕನಸಿನಲ್ಲಿ ನೋಡಿದ ಬಾಗಿಲು ಕೂಡ ಅದೇ…. ನಿಧಾನಕ್ಕೆ ಬಾಗಿಲನ್ನ ತೆರಿತಾನೆ, ಆ ಕೋಣೆಗೂ ಅವನು ಕನಸಿನಲ್ಲಿ ನೋಡಿದ ಕೋಣೆಗೂ ಏನು ವ್ಯತ್ಯಾಸ ಇರಲಿಲ್ಲ, ಅದೇ ದೀಪ…. ಅದೇ ಮಂಚ….. ಅವನ ಕನಸಲ್ಲಿ ನೋಡಿದ್ದು ಅಮ್ಮನ ಇದೇ ಕೋಣೆಯನ್ನ ಅಂತ ನೆನಪಾಯ್ತು. ಆದರೆ ಒಳಗೆ ಹೋಗೋಕೆ ಭಯ, ಆ ಹುಚ್ಚಾನು ಅಲ್ಲಿರ ಬಹುದಾ ಅನ್ನೊ ಭಯ. ಕೋಣೆಯ ಸುತ್ತ ಟಾರ್ಚ್ ಲೈಟ್ ಬಿಡ್ತಾನೆ, ಮಂಚದ ಮೇಲಿದ್ದ ಅಮ್ಮನನ್ನ ಬಿಟ್ಟರೆ ಮತ್ಯಾರು ಕಾಣಲಿಲ್ಲ. ಸ್ವಲ್ಪ ನಿರಾಳ ಆಯ್ತು, ಮೆಲ್ಲಗೆ ಕೋಣೆ ಒಳಗಡೆ ಹೋಗಿ ಮತ್ತೋಮೆ ನೋಡಿದ ಅಲ್ಲಿ ಯಾರು ಇರಲಿಲ್ಲ. ಅವನ ಅಮ್ಮ ನಿದ್ದೆಯಲ್ಲಿ ನರಳುತ್ತಾ ಇದ್ದದ್ರಿಂದ ಇವನು ಅಲ್ಲಿ ಬಂದದ್ದು ಗೊತ್ತಾಗಲಿಲ್ಲ.

ಸಂಜೆಯಿಂದ ಅಗ್ತಾ ಇದ್ದದನ್ನ ನೆನೆಸಿಕೊಂಡು ತಲೆ ಚಿಟ್ಟು ಹಿಡಿದಿತ್ತು. ನೇರವಾಗಿ ಬಂದು ಅವನ ಮಂಚದ ಮೇಲೆ ಬಿದ್ದುಕೊಂಡ, ದೇವರ ಧ್ಯಾನ ಮಾಡ್ತಾ ಮಾಡ್ತಾ ಸ್ವಲ್ಪ ಹೊತ್ತಲ್ಲಿ ಮತ್ತೆ ನಿದ್ದೆಗೆ ಜಾರಿಕೊಂಡ.

***

ಬೆಳಗ್ಗೆ ಎದ್ದವಿನಿಗೆ ರಾತ್ರಿಯ ಕನಸು, ಆ ಹುಚ್ಚ, ಪಾಳುಮನೆ ಮನೆಯ ಚಿಂತೆ ಬಿಟ್ಟರೆ ಅಮ್ಮನ ಬೆನ್ನು ನೋವಾಗಲಿ, ಮಾತ್ರೆಯ ವಿಷಯವಾಗಲಿ ನೆನಪೇ ಇರಲಿಲ್ಲ. ಎದ್ದವನೇ ಸ್ನಾನ ಮಾಡಿ ಕೆಲಸಕ್ಕೆ ಹೊರಡೊದಕ್ಕೆ ಸಿದ್ದನಾದರೂ ಒಂಥರಾ ತಲೆಯೆಲ್ಲಾ ಭಾರ ಭಾರ ಅನ್ನಿಸ್ತಿತ್ತು. ಅಡುಗೆ ಮನೆಗೆ ಬಂದು ತಿಂಡಿಗೆ ಅಂತ ಕೂತ, ಅವನು ಬರುವ ಮೊದಲೇ ಅಮ್ಮ ತಟ್ಟೆ ಇಟ್ಟು ಸಿದ್ದ ಮಾಡಿ ಬಡಿಸೋಕೆ ಅಂತ ಅವರು ಕೂತಿದ್ರು. ಏನು ಮಾತಾಡದೆ ತಿಂಡಿ ಶುರು ಹಚ್ಚಿಕೊಂಡ

“ಜ್ವರ ಹೇಗಿದೆ…..” ಅಂತ ಕೇಳ್ತ ಹಣೆ ಮೇಲೆ ಕೈಯಿಟ್ಟು ನೋಡಿದ್ರು. ರಾತ್ರಿ ನೆನಗಡಿಯನ್ನೇ ಜ್ವರ ಅಂತ ಸುಳ್ಳು ಹೇಳಿದ್ದು ನೆನಪಾಗಿ

“ಮಾತ್ರೆ ತೆಗೊಂಡೆ ಅಲ್ವ…. ಪರ್ವಾಗಿಲ್ಲ” ಅಂದ

“ಲೋ ನನ್ ಮಾತ್ರೆ ಮರಿ ಬೇಡ ಕಣೊ, ರಾತ್ರಿಯೆಲ್ಲಾ ತುಂಬಾ ನೋವಿತ್ತು….” ಹಿಂದಿನ ದಿನ ರಾತ್ರಿ ಮಾತ್ರೆ ತರ್ಲಿಲ್ವಲ್ಲ ಅಂತ ಬೇಸರಿಸಿಕೊಂಡ ಇದೆ ಪಾಣಿ. ಇವತ್ತು ಮಾತ್ರೆ ವಿಷ್ಯ ತೆಗೆದಿದ್ದು ಅವನಿಗೆ ಕಿರಿಕಿರಿ ಆಯ್ತು.

“ಆಆಆಯ್ತಮ್ಮ….. ತಿಂಡಿನಾದ್ರು ತಿನ್ನೋಕೆ ಬಿಡು”   ಅಂತ ತನ್ನ ಉಡಾಫೆ ಬುದ್ದಿನ ಮತ್ತೆ ತೋರಿಸ್ದ. ಅಮ್ಮ ಏನು ಮಾತಾಡ್ಲಿಲ್ಲ ಸುಮ್ಮನಾದ್ರು. ತಿಂಡಿ ತಿಂತ ಪಕ್ಕದಲ್ಲಿದ್ದ ಕಾಫಿ ಬಾಯಿಗಿಟ್ಟ, ಒಂದು ಗುಟುಕು ಕುಡಿದವನೇ “ಥತ್……” ಅಂತ ಲೋಟವನ್ನ ನೆಲಕ್ಕೆ ಕುಕ್ಕಿದ.

“ಸಕ್ಕರೇನೆ ಹಾಕಿಲ್ಲ….. ಒಂದು ಕಾಫಿ ನೆಟ್ಟಗೆ ಮಾಡೊಕೆ ಬರೊಲ್ಲ ನಿಂಗೆ”

“ಇಲ್ಲ ಕಣೊ ಅದು ಮರ್ತು ಹೊಯ್ತು…. ಇರು ಹಾಕ್ತಿನಿ” ಅಂತ ಸೊಂಟ ಹಿಡ್ಕೊಂಡು ಅಮ್ಮ ನಿಧಾನಕ್ಕೆ ಎದ್ರು.

“ಏನು ಬೇಕಾಗಿಲ್ಲ…. ಕಾಫಿನು ಬೇಡ ತಿಂಡಿನು ಬೇಡ…. ನಂಗಾದ್ರೆ ಮಾತ್ರೆ ತರೊಕೆ ಮರ್ತು ಹೋಯ್ತು ಅಂದ್ರೆ ಏನೇನೊ ಮಾತಾಡ್ತಿಯ…..ನೀನು ಕಾಫಿಗೆ ಸಕ್ಕರೆ ಮರ್ತು ಹೊಯ್ತು ಅಂತೀಯ ಛೆ…..” ಅಂತ ಸಿಟ್ಟಿಂದ ಎದ್ದು ಸೀದ ತನ್ನ ರೂಂ ಗೆ ಹೋದ ಕೆಲಸಕ್ಕೆ ಹೋಗೋಕೆ ಬಟ್ಟೆ ಬದಲಾಯಿಸಿ ಮನೆಯಿಂದ ಹೊರಟ. ಅಡುಗೆ ಮನೆಯಲ್ಲಿದ್ದ ತಾಯಿಗೆ ಮುಂದಿನ ಬಾಗಿಲು ಡಬ್ ಅನ್ನೊದು ಕೇಳಿಸ್ತು.

‘’ಇವನು ಎಷ್ಟು ಹೇಳಿದ್ರು ಬದಲಾಗೊ ಬುದ್ದಿ ಅಲ್ಲ ಇವಂದು” ಮಗನ ಹಠ, ಕೋಪ ಗೊತ್ತಿದ್ದ ಅಮ್ಮ ತಮ್ಮಲ್ಲೆ ಬಯ್ಕೊಂಡ್ರು.
ದಾರಿಯಲ್ಲಿ ನಡಕೊಂಡು ಹೋಗ್ತಾ ನಿನ್ನೆ ರಾತ್ರಿ ಇದೇ ರಸ್ತೇನಲ್ಲಿ ಹೆದರಿಕೊಂಡು ಓಡಿದ್ದು ನೆನಪಾಗಿ ತನ್ನಲ್ಲೆ ನಗ್ತಾ ಮುಂದೆ ಹೊದ, ಕೊಳ್ಳಿದೆವ್ವ ಸ್ಟ್ರೀಟ್ ಲೈಟ್ ಬೆಳಗ್ಗೆನು ಆನ್ ಆಫ್-ಆನ್ ಆಫ್ ಆಗ್ತಾ ಇತ್ತು. ಮುಂದೆ ಪಾಳು ಮನೆಹತ್ರ. ಬಂದ ರಾತ್ರಿಗಿಂತ ಬೆಳಕಲ್ಲೆ ಆ ಹಾಳು ಮನೆ ಚೆನ್ನಾಗಿ ಕಾಣಿಸ್ತಿತ್ತು. ಬಾಗಿಲ ಮೇಲಿನ ಲೈಟ್ ಇನ್ನೂಕೂಡ ಉರಿತಾ ಇತ್ತು. ಇಷ್ಟು ವರ್ಷ ಅದೇ ರಸ್ತೆಯಲ್ಲಿ ಓಡಾಡಿದಾನೆ ಆ ಮನೆಯನ್ನ ನೋಡಿದಾನೆ ಆದರೆ ನಿನ್ನೆ ಹೆದರಿಕೊಂಡಷ್ಟು ಯಾವತ್ತು ಅವನು ಹೆದರಿರ್ಲಿಲ್ಲ. ಹಾಗೆ ಮುಂದೆ ನಡೀತ ನಡೀತ ಮೆಡಿಕಲ್ ಎದುರು ಬಂದ ಅದು ಇನ್ನೂ ಓಪನ್ ಆಗಿರ್ಲಿಲ್ಲ.

“ಛೆ…. ನಿನ್ನೆ ರಾತ್ರಿ ನರಳಾಡ್ತಾ ಇದ್ರು ಅಮ್ಮ…. ಇವತ್ತು ಬೆಳಗ್ಗೆ ಬೇರೆ ರೇಗಾಡಿ ಬಿಟ್ಟೆ…. ಸಕ್ಕರೆ ಹಾಕಿಲ್ಲಾ ಅಂತ ರಾಕ್ಷಸನತರ ಆಡ್ಬಿಟ್ಟೆ…. ಯಾಕ್ ಆಥರ ಕೋಪ ಬಂತೋ ಏನೊ….” ಅಂತ ಅಮ್ಮನ ಬಗ್ಗೆ ಯೋಚಿಸ್ತಾ ಮುಂದೆ ಹೋದ. ಮುಂದೆ ದೇವಸ್ಥಾನ ಬಂತು ಅಲ್ಲೆ ಪಕ್ಕದ ಟೀ ಅಂಗಡಿಯಲ್ಲಿ ನಿನ್ನೆ ನೋಡಿದ ಉದ್ದ ಗಡ್ಡದ ಹುಚ್ಚ ಟೀ ಬನ್ ಗೋಸ್ಕರ ಜಗಳ ಆಡ್ತಾ ಇದ್ದದ್ದು ಕಾಣಿಸ್ತು. ದೇವಸ್ಥಾನದ ಬಾಗಿಲ ಹತ್ರ ಆಗತಾನೆ ಬೆಳಗಿನ ಪೂಜೆ ಮುಗಿಸಿಕೊಂಡು ಮುಖ್ಯ ಅರ್ಚಕರು ಬರ್ತಾ ಇದ್ರು. ಅವರು ಇವನ ತಂದೆಯ ಹಳೆ ಗೆಳೆಯ. ಹತ್ತಿರ ಬರ್ತಾ ಇದ್ದ ಹಾಗೆ.

“ನಮಸ್ಕಾರ ಆಚಾರ್ರೆ…….”

“ಓ ಪಾಣಿ ಏನೊ ಸಮಾಚಾರ…. ಜಾಸ್ತಿ ಕಾಣೊಕೆ ಸಿಗಲ್ವಲ್ಲ ನೀನು???” ಅಂತ ಮಾತಿಗಿಳಿದ್ರು.

“ಇಲ್ಲ ಇದೆ ರಸ್ತೇಲಿ ಓಡಾಡೊದು……. ಇವತ್ತು ಸ್ವಲ್ಪ ಬೇಗ ಹೊರಟೆ” ಅಂದ

“ಹೌದು…. ಬಸ್ ಹೊರಡೊದು ಸ್ವಲ್ಪ ಹೊತ್ತಿದೆ ಅಲ್ವ????..... ಸರಿ ದೇವಸ್ಥಾನಕ್ಕೆ ಬಾ ಪ್ರಸಾದ ತೆಗೊಂಡು ಹೋಗು” ಅಂತ ಮತ್ತೆ ದೇವಸ್ಥಾನದ ಕಡೆಗೆ ಹೊರಟ್ರು. “ನಿನ್ನ ತಂದೆ ಇದ್ದಗ ದಿನಾ ಬಂದು ಮಾತಾಡಿಸಿ ಪ್ರಸಾದ ತೆಗೊಂಡು ಹೋಗ್ತಿದ… ಹ ಹ ಹ…” ಅಂತ ಅವರು ಮುಂದೆ ಹೋಗ್ತಿದ್ರೆ, ಇವನು ಆವರ ಹಿಂದೆ ಕೋಲೆ ಬಸವನ ಹಾಗೆ ತಲೆ ಅಲ್ಲಾಡಿಸಿಕೊಂಡು ಹೋದ.
ಗರ್ಭ ಗುಡಿ ಹತ್ರದಿಂದ ದೇವಿಗೆ ಕೈ ಮುಗಿದು ತೀರ್ಥ, ಪ್ರಸಾದ ತೆಗೊಂಡು ಅಲ್ಲೆ ಜಗಲಿಯ ಮೇಲೆ ಕೂತ್ಕೊಂಡ. ಅಚಾರ್ರು ಕೂಡ ಮತ್ತೆ ಅವನ ಪಕ್ಕ ಬಂದ್ರು

“ಅಮ್ಮ ಚೆನ್ನಾಗಿದರ……………..” ಅಂತ ಅವನ ಪಕ್ಕದಲ್ಲಿ ಕೂತ್ಕೊಂಡ್ರು.

“ಹಾಂ…. ಚೆನ್ನಾಗಿದಾರೆ” ಅಂತ ಸಪ್ಪೆ ಮುಖಮಾಡ್ಕೊಂಡು ಹೇಳಿದ. ಅವನ ಮುಖ ನೋಡಿ

“ಏನೋ ಹುಷಾರಿಲ್ವ???? ಮುಖ ಒಂಥರಾ ಇದೆ???? ಏನಾದ್ರು ಸಮಸ್ಯೆನ??? ಮುಖದಲ್ಲಿ ಏನೊ ಭಯ, ಆತಂಕ ಕಾಣ್ತಾ ಇದೆ…. ಅಮ್ಮ ನಿಜವಾಗಲೂ ಹುಷಾರಾಗಿದಾರೆ ತಾನೆ???” ಅಂತ ಕೇಳಿದ್ರು.

“ ಅದೇನೋ ಗೊತಿಲ್ಲ ಆಚಾರ್ರೆ ನಿನ್ನೆ ರಾತ್ರಿ ಒಂದು ಕೆಟ್ಟ ಕನಸು ಬಿದ್ದಿತ್ತು…. ಅಮ್ಮನಿಗೆ ಹುಷಾರಿಲ್ಲದೇ ಇರೋ ಹಾಗೆ… ಯಾವುದೋ ಹಾಳು ಮನೆಗೆ ಹೋದಹಾಗೆ…. ಇಲ್ಲಿ ತನಕ ನನ್ನ ಜೀವಮಾನದಲ್ಲಿ ಇಷ್ಟು ಹೆದರಿರ್ಲಿಲ್ಲ ನಾನು, ಆ ಕನಸು ಬಿದ್ದ ಮೇಲೆ ಯಾಕೋ ನೆಮ್ಮದಿನೆ ಇಲ್ಲ….”

ಅಚಾರ್ರು ಅವನನ್ನೇ ನೋಡಿ ಏನೊ ಯೊಚನೆ ಮಾಡಿ ಅಲ್ಲಿಂದ ಮತ್ತೆ ದೇವಸ್ಥಾನದ ಒಳಗಡೆ ಹೋದ್ರು. ಸ್ವಲ್ಪ ಹೊತ್ತು ಬಿಟ್ಟು ಬಂದವರು ಅವನ ಕೈಗೆ ಒಂದು ದಾರ ಕಟ್ಟಿದ್ರು.

“ಇದು ಪೂಜೆ ಮಾಡಿದ ದಾರ…. ಇದರ ಮೇಲೆ ನಂಬಿಕೆ ಇಟ್ಟರೆ ಇದು ನಿನ್ನ ಕಾಪಾಡುತ್ತೆ…. ನೀನು ಹೇಳೊದು ನೋಡಿದ್ರೆ ಏನೋ ನೋಡಿ ಹೆದರಿ ಕೊಂಡ ಹಾಗಿದೆ…. ಧೈರ್ಯವಾಗಿರು ಏನಾಗಲ್ಲ” ಅಂದ್ರು, ಅಷ್ಟು ಹೊತ್ತಿಗೆ ದೇವಸ್ಥಾನದ ಬಾಗಲಲ್ಲಿ ಯಾರೊ ಯಾರನ್ನೋ ಬಯ್ಯೊದು ಕೇಳಿಸ್ತು. ದೇವಸ್ಥಾನದ ಪಹರೆಯವನು ಆ ಹುಚ್ಚನನ್ನ ಬಾಗಿಲಿಂದ ಬಲವಂತವಾಗಿ ಹೊರಗೋಡಿಸ್ತಾ ಇದ್ದ.

“ಅವನು ಯಾರು ಹುಚ್ಚಾನ????” ಆಚಾರನ್ನ ಪ್ರಶ್ನೆ ಮಾಡಿದ.

“ಪಾಪ…. ಅವನ ಕಥೆನೆ ಬೇರೆ…. ಹೇಗಿದ್ದ ಹೇಗಾಗ್ಬಿಟ್ಟ….. “ ಅಚಾರ್ರ ಮಾತು ಕೇಳಿ

“ಏನ್ ಕಥೆ……???” ಅಂತ ಕುತೂಹಲದಿಂದ ಪಾಣಿ ಮತ್ತೆ ಪ್ರಶ್ನೆ ಮಾಡಿದ.

“ಅವನ ಮಾಡಿದ ತಪ್ಪು ಅವನನ್ನ ಹುಚ್ಚನನ್ನಾಗಿಸ್ತು……….” ಆಚಾರ್ರು ಮತ್ತೆ ಪಕ್ಕದಲ್ಲಿ ಕೂತು ಕಥೆ ಮುಂದುವರೆಸಿದ್ರು.

“8 ವರ್ಷದ ಹಿಂದಿನ ಕಥೆ….. ಇವನ ಅಪ್ಪ ಗಿರಿಸಾಗರದಲ್ಲಿ ಇದ್ಯಲ್ಲ ಕೋ-ಓಪರೇಟಿವ್ ಬ್ಯಾಂಕ್, ಅದರ ಮೊದಲ ಮೇನೆಜರ್. ತುಂಬ ಪಾಪದ ಮನುಷ್ಯ. ಅದಕ್ಕೆ ಸರಿಯಾಗಿ ಅವನ ಹೆಂಡತಿ ಇವನ ತಾಯಿ ತುಂಬಾ ಗುಣವಂತೆ. ಈ ಹುಚ್ಚಾ ಇದಾನಲ್ವ ಇವನು ಅವರ ಒಬ್ಬನೇ ಮಗ ಬಾಲಕೃಷ್ಣ. ತುಂಬಾ ಬುದ್ದಿವಂತ. ಹತ್ತು ವರ್ಷದ ಹಿಂದೆ ರೈಲು ಅಪಘಾತದಲ್ಲಿ ಇವನ ಅಪ್ಪ ತೀರಿಕೊಂಡ್ರು. ಪಾಪ ಆವಾಗ ಇವನಿಗೆ ಬರೇ 19 ವರ್ಷ. ಮನೆ ಜವಾಬ್ದಾರಿ ತೆಗೊಳೊ ಅನುಭವನೂ ಅವನಿಗೆ ಇರಲಿಲ್ಲ, ಇವನ ಅಪ್ಪ ಸಮಾಜಕ್ಕೆ ಮಾಡಿದಷ್ಟು ಸಹಾಯಾ ಅವನ ಮನೆಗೂ ಮಾಡಿರ್ಲಿಲ್ಲಿ, ಅವರ ಸಾವು ಅಕ್ಷರ ಸಹ ಅಮ್ಮಾ ಮಗನನ್ನ ಬೀದಿಗೆ ತಂದು ಬಿಡ್ತು.

ಆದರೆ ಜೀವನಕ್ಕೆ ಏನಾದ್ರು ಆಗಬೇಕಲ್ಲ ಈ ಹುಡುಗ ಬೆಳಗ್ಗೆ ಕಾಲೇಜ್ ಹೋಗಿ ಸಂಜೆ ನಾಲ್ಕೈದು ಅಂಗಡಿಯಲ್ಲಿ ಲೆಕ್ಕ ಬರೆಯೋ ಕೆಲಸ ಮಾಡ್ತಾ ಇದ್ದ. ಎರಡು ವರ್ಷದಲ್ಲಿ ಡಿಗ್ರಿ ಪಾಸ್ ಮಾಡ್ಕೊಂಡ.  ಮಂಜಿನ ಕೊಪ್ಪದಲ್ಲಿ ಆಗ ಒಂದೂ ಬ್ಯಾಂಕೇ ಇರಲಿಲ್ಲ ಎಲ್ಲಾದಕ್ಕೂ ಗಿರಿಸಾಗರಕ್ಕೇ ಹೋಗ ಬೇಕಿತ್ತು. ಈಗ ಸ್ವಲ್ಪ ವರ್ಷದ ಹಿಂದೆ ಒಂದು ಪ್ರೈವೇಟ್ ಬ್ಯಾಂಕ್ ನವರು ಇಲ್ಲಿ ಬ್ರಾಂಚ್ ತೆರೆದ್ರು. ಈ ಹುಡುಗ ಚೆನ್ನಾಗಿ ಓದಿಕೊಂಡಿದ್ದ ಬೇರೆ, ಅವರೆ ಕರ್ದು ಕೆಲಸ ಕೊಟ್ರು. ಅಲ್ಲಿಂದ ನಂತರ ಜೀವನ ಸ್ವಲ್ಪ ದಾರಿಗೆ ಬಂತು. ಚಿಕ್ಕ ಮನೆಯಲ್ಲಿದ್ದವರು ಬೇರೆ ಮನೆಗೆ ಬದಲಾಯಿಸಿದ್ರು, ಅದೇ ನಿಮ್ಮ ಮನೆ ದಾರಿಯಲ್ಲಿ ಒಂದು ಪಾಳು ಮನೆ ಇದ್ಯಲ್ವ???? ಅದೇ ಮನೆ….”

ಪಾಳು ಮನೆ ಅಂದ ತಕ್ಷಣ ಇವನ ಕಿವಿ ನೆಟ್ಟಗಾಯ್ತು. “ಆ ಬಾಗಿಲು ಮುರ್ಕೊಂಡು ಬಿದ್ದಿದೆ ಅಲ್ವ ಆ ಮನೆನ???”

“ಅದೇ ಮನೆ….. ನಾನು ಹೇಳಿದ್ದೆ ವಾಸ್ತು ಸರೀ ಇಲ್ಲ ಇರೋ ಆ ಮನೆ ಬೇಡ ಅಂತ…. ಜೊತೆಗಿದ್ದ ಅವನ ಅಮ್ಮಾನು ಹೇಳಿದ್ರು ಬೇಡ ಈ ಮನೆ ಅಂತ, ಈಗಿನ ಹುಡುಗರು ಕೇಳ ಬೇಕಲ್ಲ, ಅವನು ಒಂಥರ ಹಠಮಾರಿ ಮಾತು ಕೇಳಲೇ ಇಲ್ಲ, ಅದೇ ಮನೆಗೆ ಅಮ್ಮಾ ಮಗ ಬಂದು ಬಿಟ್ಟ್ರು….. ಆ ಮೇಲೆ ಆಗಿದ್ದು ಕೇಳಿದ್ರೆ …..” ಅಂತ ಮಾತು ನಿಲ್ಲಿಸಿ ಬಿಟ್ರು. ಪಾಣಿ ಎಂಜಲು ನುಂಗಿಕೊಂಡ.

“ಏನಾಯ್ತು ಆ ಮೇಲೆ….????” ಪಾಣಿಗೆ ಒಂದುಅ ಕಡೆ ಕುತೂಹಲ, ಇನ್ನೊಂದು ಕಡೆ ಕನಸಿನಲ್ಲಿ ಕಂಡ ಮನೆಯಾದ್ದರಿಂದ ಭಯ.

“ ಅವನನ್ನ ಚಿಕ್ಕ ವಯಸ್ಸಿನಿಂದ ನೋಡ್ತಾ ಇದಿನಿ, ನಿನ್ನ ಥರಾನೆ ಹಠ, ಕೋಪ, ಅವನು ಹೇಳಿದ್ದೇ ಆಗಬೇಕು ಅನ್ನೊ ಬುದ್ದಿ”
ಇದನ್ನ ಕೇಳಿ ಪಾಣಿ ತಲೆ ತಗ್ಗಿಸಿ

“ಆಚಾರ್ರೆ …. ಅದೂ ಹಠ ಅಂದ್ರೆ…..” ಅಂತ ಪಾಣಿ ಏನೋ ಹೇಳೊಕೆ ಶುರು ಮಾಡಿದ.

“ನಿನ್ನ ವಿಚಾರ ಬಿಡು…. ಇವನು ಸ್ವಲ್ಪ ವಿಚಿತ್ರ….. ಒಂದು ಕಡೆಅ ಇವನಿಗೆ ಅಮ್ಮಾ ಅಂದ್ರೆ ತುಂಬಾನೆ ಇಷ್ಟ, ಆದರೆ ಸಿಟ್ಟು ಬಂತು ಅಂದ್ರೆ ಅದೆ ಅಮ್ಮನನ್ನೇ ಬಯ್ತಾ ಇರ್ತಾನೆ, ಏನ್ ವಿಷ್ಯಾ ಇದ್ರೂನು ಅಮ್ಮನ ಹತ್ರ ಹೇಳಲೇ ಬೇಕು, ಅಮ್ಮನನ್ನ ಬಿಟ್ರೆ ಮನಸು ಬಿಚ್ಚ್ಚಿ ಮಾತಾಡೊ ಯಾವ ಸ್ನೇಹಿತರಾಗಲಿ ಆಪ್ತರಾಗ್ಲಿ ಯಾರು ಇರಲಿಲ್ಲ, ಅಮ್ಮಾನೆ ಎಲ್ಲ. ಸಿಟ್ಟು ಬಂದ್ರೆ ಎರಡು ಮೂರು ದಿವಸ ಅಮ್ಮನ ಹತ್ರ ಮಾತು ಬಿಡ್ತಿದ್ದ, ಮತ್ತೆ ಅವನೇ ಮಾತಾಡಿಕೊಂಡು ಹೋಗ್ತಿದ್ದ, ಸಂತೋಷ ಆಗಲಿ ದುಃಖ ಆಗಲಿ ಏನಿದ್ರು ಅಮ್ಮನ ಹತ್ರ ಹೇಳಿ ಬಿಡ್ತಿದ್ದ, ಮನಸಲ್ಲಿ ಏನು ಇಟ್ಕೊತಿರ್ಲಿಲ್ಲ.

ಕೆಲಸಕ್ಕೆ ಸೇರಿ ಅವನಲ್ಲಾಗಿದ್ದ ಬದಲಾವಣೆ ಅಂದ್ರೆ, ಕೆಲಸದ ಭರದಲ್ಲಿ ಮನೆ ಕಡೆ ಸಮಯ ಕೊಡೋದು ಕಡಿಮೆ ಆಯ್ತು. 6-7 ಗಂಟೆಗೆಲ್ಲಾ ಮನೆಗೆ ಬರ್ತಾ ಇದ್ದವನು ಕ್ರಮೇಣ 8:30, 9:00, 9:30 ಹೀಗೆ ತಡವಾಗಿ ಬರೋಕೆ ಶುರುಮಾಡಿದ, ಅದರೆ ತಾಯಿ ಹತ್ರ ಮಾತಾಡೊದು, ಜಗಳ ಆಡೊದು, ಮಾತು ಬಿಡೋದು ಮತ್ತೆ ಮಾತಾಡೊದು ಆಗ್ತಾನೆ ಇತ್ತು. ಆದರೆ ಈ ಬಾರಿ ಅಮ್ಮಾ ಮಗನ ಗ್ರಹಚಾರ ಸರಿ ಇರ್ಲಿಲ್ಲಾ ಅನ್ಸುತ್ತೆ, ಹೊಸ ಮನೆಗೆ ಬಂದು ಹತ್ರತ್ರ ಒಂದು ವರ್ಷಾ ಆಗಿತ್ತು. ಮನೆ ಮುಂದುಗಡೆ ಬಾಗಿಲಿಗೆ ಇದ್ದದ್ದು ಒಂದೆ ಚಿಲಕ ಅದೂ ಬಾಗಿಲ ತುದಿಯಲ್ಲಿ, ಶುರುವಾತಿನಲ್ಲಿಯೇ ಅವನ ಅಮ್ಮ ಬಾಗಿಲಿನ ಮಧ್ಯೆ ಅಡ್ಡ ಚಿಲಕ ಮಾಡಿಸ ಬೇಕು ಅಂತ ಹೇಳಿದ್ರು. ಆದ್ರೆ ಇವನು ಆ ವಿಷಯ ತಲೆಗೇ ಹಾಕಿಕೊಳ್ಳಲಿಲ್ಲ. ಒಂದು ವರ್ಷದಲ್ಲಿ ಇದ್ದ ಒಂದು ಚಿಲಕವೂ ಕೂಡ ಬಲಹೀನವಾಗಿತ್ತು. ಹೊರಗಡೆಯಿಂದ ಯಾರಾದ್ರು ಬಲವಾಗಿ ದೂಡಿದ್ರೆ ತೆರೆದು ಕೊಳ್ಳೊವಷ್ಟು ದುರ್ಬಲವಾಗಿತ್ತು. ಅವತ್ತು ಅವನ ಅಮ್ಮ

“ಬಾಲು…..ಮುಂದುಗಡೆ ಬಾಗಿಲು ಚಿಲಕ ಬದಲಾಯಿಸ ಬೇಕು ಅನ್ಸುತ್ತೆ, ತುಂಬಾ ಸಡಿಲ ಆಗಿದೆ, ಜೋರಾಗಿ ತಳ್ಳಿ ಬಿಟ್ಟರೆ ಆರಾಮಾಗಿ ತೆರ್ಕೊಳ್ಳುತ್ತೆ ಕಣೋ”

“ಒಂದು ವರ್ಷಾನು ಆಗಿಲ್ಲ ಅದು ಹೇಗೆ ಹಾಳಾಗುತ್ತೆ???? ಅವಾಗಾವಾಗ ಲೆಕ್ಕಕ್ಕಿಂತ ಜಾಸ್ತಿ ಹಾಕೋದು ತೆರೆಯೋದು ಮಾಡಿರ್ತೀಯ ಅದಕ್ಕೆ ಹಾಳಾಗಿರುತ್ತೆ” ಅಂತ ಅಮ್ಮನಿಗೆ ದಬಾಯಿಸಿದ್ದ.

“ರಾತ್ರಿ ನೀನು ಬರೋವರೆಗೂ ನಾನು ಒಬ್ಬಳೆ ಅಲ್ವೇನೊ ಇರೋದು, ಯಾವಗಲೂ ಬಾಗಿಲಿ ಹಾಕೊಂಡೆ ಇರ್ತೀನಿ, ಯಾರಾದ್ರು ಬಂದಾಗ ಮಾತ್ರ ಬಾಗಿಲು ತೆರೆಯೋದು….. ಅದೂ ಅಲ್ಲದೆ ನೀನು ಇತ್ತೀಚಿಗೆ ಬರೋದು ತಡವಾಗ್ತಿದೆ, ಅಕ್ಕ ಪಕ್ಕದಲ್ಲಿ ಹತ್ತಿರ ಮನೇನು ಇಲ್ಲ, ಅಷ್ಟು ರಾತ್ರಿ ನಾನು ಒಬ್ಬಳೇ ಇರೋಕೆ ಭಯವಾಗುತ್ತೆ ನಂಗೆ”

‘ಓ….. ಹಾಗಂತ ಬ್ಯಾಂಕ್ ಕೆಲಸ ಬಿಟ್ಟು ಇಲ್ಲಿ ಬಂದು ಕೂತ್ಕೊ ಬೇಕ????? ಅದೆಲ್ಲಾ ಆಗಲ್ಲ….. ಅದೂ ಅಲ್ಲದೆ ಇಲ್ಲಿ ಯಾರದೂ ಭಯ ಇಲ್ಲ…. ರಿಪೇರಿ ಮಾಡಿಸ್ತೀನಿ ಬಿಡು….” ಅಂತ ಅಂದಿದ್ದ. ಒಂದುವಾರವಾದರೂ ರಿಪೇರಿ ಮಾಡಿಸಲೇ ಇಲ್ಲ, ಅವನ ಅಮ್ಮ ಅವಾಗವಾಗ ಹೇಳ್ತಾನೆ ಇದ್ರು. ಅವಾಗವಾಗ ಹೇಳಿದ್ದು ಕಿರಿ ಕಿರಿ ಆಯ್ತು ಅನ್ಸುತ್ತೆ. ಈ ವಿಷಯವಾಗಿ ಮತ್ತೆ ಅಮ್ಮನ ಹತ್ರ ಮಾತು ಬಿಟ್ಟ. ಎರಡು ವಾರ ಆಯ್ತು. ಇವನು ಹಠ ಬಿಡಲೇ ಇಲ್ಲ. ಬ್ಯಾಂಕ್ ನಲ್ಲಿ ಇವನ ಕೆಲಸ ನೋಡಿ ಹೆಡ್ ಆಫಿಸ್ ನಿಂದ ಪ್ರಮೋಷನ್ ಆರ್ಡರ್ ಕೂಡ ಕೈಗೆ ಬಂದಿತ್ತು. ಅದನ್ನ ಅಮ್ಮನ ಹತ್ರ ಹೇಳ ಬೇಕು ಅನ್ನಿಸಿದ್ರು ಮೊಂಡು ಹಠದಿಂದ ಹೇಳಲೇ ಇಲ್ಲ, ಚಿಲಕ ರಿಪೇರಿನೂ ಮಾಡಿಸಲಿಲ್ಲ.

ಅವತ್ತಿಗೆ ಒಂದು ತಿಂಗಳು ಮೇಲಾಗಿತ್ತು ಮಾತು ಬಿಟ್ಟು, ಅಷ್ಟು ದಿನಗಳವರೆಗೆ ದೀರ್ಘವಾಗಿ ಮಾತು ಬಿಟ್ಟಿದ್ದು ಅದೇ ಮೊದಲು. 9:30 ತನಕ ಕೆಲಸಮಾಡಿ ಬ್ಯಾಂಕ್ ನಿಂದ ಹೊರಟ. ಇವತ್ತು ಅಮ್ಮನ ಹತ್ರ ಮಾತಾಡ ಬೇಕು ಅಂತ ಖುಷಿಯಿಂದ ಮನೆ ಹತ್ರ ಬಂದ. ಗೇಟ್ ತೆಕ್ಕೊಂಡು ಸ್ವಲ್ಪ ಒಳಗಡೆ ಹೋದವನು ಮಧ್ಯದಲ್ಲೇ ನಿಂತು ಬಿಟ್ಟ. ಕಣ್ಣ ಮುಂದಿದ್ದ ಮನೆಯನ್ನ ನೋಡಿ ಗಾಬರಿಯಿಂದ ಕೈಯಲ್ಲಿದ್ದ ಬ್ಯಾಗ್ ಕೆಳಗಡೆ ಬಿತ್ತು. ಮನೆಯ ಮುಂದಿನ ಒಂದು ಬಾಗಿಲು ಮುರಿದು ಬಿದ್ದಿತ್ತು. ಭಯದಿಂದ ಉಗುಳು ನುಂಗಿಕೊಂಡೆ ಒಳಗಡೆ ಹೋದ

ಭಯದಲ್ಲೇ   “ಅಮ್ಮಾ….. ………“ಅಂತ ಕೂಗಿದ ಪ್ರತಿಯಾಗಿ ಏನು ಉತ್ತರಾನೆ ಇಲ್ಲ. ಚಿಲಕ ಸರಿ ಮಾಡ್ಸು ಅಂತ ಅವನ ಅಮ್ಮ ಸಾರಿ ಸಾರಿ ಹೇಳಿದ್ದು ಈಗ ಕಿವಿಯಲ್ಲಿ ಗುಯ್ ಗುಡೊಕೊ ಪ್ರಾರಂಭ ಆಯ್ತು. ಒಳಗೆ ಹೋಗಿ ಎಡಭಾಗಲ್ಲಿರೋ ಕೊಣೆ ಬಾಗಿಲನ್ನ ನಿಧಾನಕ್ಕೆ ತೆರೆದ ಅಷ್ಟೆ……….”

ಆಚಾರ್ರು ತಮ್ಮ ದೀರ್ಘವಾದ ಕಥೆಯನ್ನ ನಿಲ್ಲಿಸಿ ಪಾಣಿಯ ಮುಖವನ್ನ ನೋಡಿದ್ರು. ಅವನು ಮತ್ತೆ ಹೆದರಿ ಬೆವತು ಹೋಗಿದ್ದ, ಅವನ ಮುಖದಲ್ಲಿ ಮುಂದೇನು ಅನ್ನೊ ಪ್ರಶ್ನೆಇತ್ತು.

“ಏನಾಯ್ತು ಆಚಾರ್ರೆ…… ರೂಂ ನಲ್ಲಿ ಏನಿತ್ತು????”

“ಅವನ ಅಮ್ಮ ರಕ್ತದ ಮಡುವಲ್ಲಿ ಬಿದ್ದಿದ್ಲು……. ಮೇಜು ಕುರ್ಚಿ, ಅಲ್ಮೇರ ಎಲ್ಲಾ ಚೆಲ್ಲಾಪಿಲ್ಲಿಯಾಗಿತ್ತು. ಮನೆಯಲ್ಲಿ ಹೆಂಗಸು ಒಬ್ಬಳೇ ಇರೋದು ಅಂತ ಗೊತ್ತಾಗಿ ಯಾರು ಕಳ್ಳರು ಬಾಗಿಲು ಮುರಿದು ಒಳಗೆ ನುಗ್ಗಿ ಅವಳನ್ನ ಕೊಲೆ ಮಾಡಿ ಎಲ್ಲಾ ದೋಚಿಕೊಂಡು ಹೋಗಿದ್ರು…….ಪಾಪ ಅವನ ತಾಯಿ…..” ಅನ್ನೊ ಹೊತ್ತಿಗೆ ಪಾಣಿ ಕಣ್ಣಲ್ಲಿ ನೀರು ತುಂಬಿಕೊಂಡಿ ಬಿಡ್ತು.
ಅಚಾರ್ರು ಮುಂದುವರೆಸ್ತಾ….. “ ಅದಿಕ್ಕೆ ದೊಡ್ಡವರ ಮಾತು ಕೇಳ ಬೇಕು ಅನ್ನೋದು, ವಾಸ್ತು ಸರಿ ಇಲ್ಲ ಅಂತ ನಾನ್ ಹೇಳಿದ್ದೆ, ಚಿಲಕ ಸರಿಮಾಡಿಸೂ ಅಂತ ಅಮ್ಮ ಹೇಳಿದ್ರು. ಆದರೆ ಅವನ ಹಠಕ್ಕೆ ಪಾಪದ ಅಮ್ಮ ಬಲಿಯಾದ್ರು…….

 ಬೆಳಗ್ಗೆ ಇದ್ದವಳು ರಾತ್ರೆ ಮನೆಗ ಬರೋವಾಗ ಸತ್ತು ಬಿದ್ದಿರೋದು ನೋಡಿ ಅವನ ಮನಸ್ಸಿಗೆ ಆಘಾತ ಆಯ್ತು. ಅಮ್ಮನ ಅಚಾನಕ್ ಅಗಲುವಿಕೆಯಿಂದ ಕುಗ್ಗಿ ಹೋದ, ದಿನಾ ದಿನಾ ಕೆಲಸ ಮೇಲೆ ಮೊದಲಿದ್ದ ಆಸಕ್ತಿ ಕಮ್ಮಿ ಆಯ್ತು, ಮಾತು ಬಿಟ್ಟ, ಒಂಟಿಯಾಗಿ ಇರೋಕೆ ಶುರುಮಾಡಿದ, ಒಂದು ತಿಂಗಳಿಂದ ಅಮ್ಮನ ಹತ್ರ ಮನಸ್ಸು ಬಿಚ್ಚಿ ಮಾತನಾಡ ಬೇಕು ಅಂತ ಇದ್ದ ಎಷ್ಟೊ ವಿಷಯ ಮನಸಲ್ಲೆ ಇತ್ತು. ಅದನ್ನೆ ನೆನಸಿಕೊಂಡು ಕೊರಗೋಕೆ ಶುರುಮಾಡಿದ, ಈಗ ಮಾತಾಡೊಕೆ ಅಮ್ಮ ಇಲ್ಲ, ಅಮ್ಮನಸಾವಿಗೆ ನಾನೆ ಕಾರಣ ಅನ್ನೊ ಅವನ ಯೋಚನೆ ಅವನಿಗೆ ಹುಚ್ಚು ಹಿಡಿಸಿ ಬಿಡ್ತು. ಒಂದೊಂದು ಸರ್ತಿ ನಗ್ತಾನೆ, ಅವಾಗಾವಗ ದೇವರ ಮುಂದೆ ಕೂತು ಅವನಿಗೆ ಪ್ರಮೋಷನ್ ಸಿಕ್ತು ಅದು ಇದು ಅಂತ ಅವನ ಅಮ್ಮನ ಹತ್ರ ಹೇಳದೆ ಇರೋದನ್ನೆಲ್ಲಾ ಅವನ ಪಾಡಿಗೆ ಹೇಳ್ತಾ ಜೋರಾಗಿ ಅಳೊಕೆ ಶುರುಮಾಡ್ತಾನೆ. ಅವನಿಗೆ ತನ್ನವರೂ ಅಂತ ಯಾರು ಇಲ್ಲ, ನನಗೆ ಸಿಗೋ ದೇವಸ್ಥಾನದ ನೈವೇದ್ಯದಲ್ಲೆ ಅವನಿಗೂ ಕೊಡ್ತಿನಿ. ತಿಂದು ಕೊಂಡು ಗಲಾಟೆ ಮಾಡಿಕೊಂಡು ಇಲ್ಲೇ ಅಡ್ಡಡ್ತಾ ಇರ್ತಾನೆ……..” ಅಂತ ಆಚಾರ್ರು ಅವನ ಕಥೆ ಮುಗಿಸಿದ್ರು.

ಕಥೆ ಕೇಳಿ ಚಕ್ರಪಾಣಿಗೆ ಅಳು ಬರೋ ಹಾಗಯ್ತು, ಆಚಾರ್ರಿಗೆ ಗೊತ್ತಾಗ ಬಾರದು ಅಂತ ಮುಖ ತಿರುಗಿಸಿ ಕಣ್ಣಿರು ಒರೆಸಿಕೊಂಡ.
“ಆಚಾರ್ರೆ ಬಸ್ ಗೆ ಟೈಮ್ ಆಯ್ತು……. ನಾನು ಹೊರಡ್ತೀನಿ” ಅಂತ ಹೇಳಿ ಅಚಾರ್ರು ಹಾಂ…. ಅಂತ ಹೇಳೊ ಮೊದಲೆ ಅಲ್ಲಿಂದ ಹೊರಟ, ಹೊರಗಡೆ ಆ ಹುಚ್ಚ ಬಾಲ ಕೃಷ್ಣ ಕೂತಿದ್ದ. ಆಕಾಶ ನೋಡಿಕೊಂಡು ಏನೋ ಮಾತಾಡ್ತಾ ಇದ್ದ….

***

ಹುಚ್ಚನ ಕಥೆ ಕೇಳ್ತಾ ಇದ್ದ ಹಾಗೆ ಪಾಣಿಗೆ ಎಲ್ಲೋ ತನ್ನ ಕಥೆಯನ್ನೇ ಕೇಳಿದ ಹಾಗಾಯ್ತು. ಇಡೀ ದಿವಸ ಅವನಿಗೆ ಸರಿಯಾಗಿ ಕೆಲಸ ಮಾಡೊಕೆ ಆಗಲಿಲ್ಲ, ಅಮ್ಮಾನೆ ಕಣ್ಣ ಮುಂದೆ ಬರ್ತಾ ಇದ್ದಳು. ರಾತ್ರಿ ನೋವಲ್ಲಿ ಅಮ್ಮ ನರಳಾಡೊ ಧ್ವನಿಯೇ ಮತ್ತೆ ಮತ್ತೆ ಕೇಳಿಸ್ತಾ ಇತ್ತು. ಮೂರು ದಿವಸದಿಂದ ಸುಳ್ಳು ಹೇಳ್ತಾ ಮಾತ್ರೆ ವಿಷಯವನ್ನ ತೇಲಿ ಹಾಕ್ತಾ ಇದ್ದ ತನ್ನ ಬಗ್ಗೆ ಒಂದು ರೀತಿ ಜಿಗುಪ್ಸೆ ಉಂಟಾಯಿತು.

ಆ ಬಾಲಕೃಷ್ಣನ ಹಾಗೆ ನಂಗೂ ಕೂಡ, ಅಮ್ಮ ಬಿಟ್ಟರೆ ನನಗಾರಿದಾರೆ???

ಬರೆ ನೆಗಡಿಗೆ ಮಾತ್ರೆ ತೆಗೊಂಡ ನನಗೆ, ಅಮ್ಮನ ನೋವು ಯಾಕೆ ಗೊತ್ತಾಗ್ಲಿಲ್ಲ???

ನನ್ನ ಜೀವನದಲ್ಲಿ ಎಷ್ಟು ಸಲ ನಾನು ಅಮ್ಮನಿಗೆ ನೋವು ಕೊಟ್ಟಿಲ್ಲ

ನಾನು ಮನುಷ್ಯನೋ ರಾಕ್ಷಸನೋ…???

ಇಲ್ಲ ನಾನು ಬದಲಾಗಬೇಕು….. ನನ್ನ ಸ್ವಾರ್ಥಕ್ಕೆ ಅವನ ತರ ನಾನು ಅಮ್ಮನನ್ನ ಕಳೆದುಕೊಳ್ಳೊದಿಕ್ಕೆ ನಾನು ತಯಾರಿಲ್ಲ
ಹೀಗೆ ಯೋಚನೆ ಮಾಡ್ತಾ ಅವತ್ತು ಆಫೀಸಿಂದ ಹೊರಟ, ಮಂಜಿನ ಕೊಪ್ಪದಲ್ಲಿ ಮಾತ್ರೆ ಸಿಗುತ್ತೋ ಇಲ್ಲವೋ ಅಂತ ಗಿರಿಸಾಗರದಲ್ಲೆ ಮಾತ್ರೆ ತೆಗೊಂಡು ಬಸ್ ಹತ್ತಿಕೊಂಡ, ಮಾಮೂಲಿಯಂತೆ 7 ಘಂಟೆಗೆ ಬಸ್ ಬಂತು. ದೇವಸ್ಥಾನದ ಹತ್ತಿರ ಬಂದ. ಆ ಹುಚ್ಚ ಹಿಂದಿನ ದಿನ  ಮಲಗಿದ್ದ ಜಾಗದಲ್ಲೇ ಮಲಗಿದ್ದ. ಏನನ್ನಿಸ್ತೋ ಏನೊ ಒಂದು ಪ್ಯಾಕ್ ಬನ್ ತೆಗೊಂಡು ಸೀದ ಹುಚ್ಚನ ಹತ್ತಿರ ಹೋದ, ಅವನು ಇವನನ್ನ ನೋಡಿ

“ನಮಸ್ಕಾರ ಸರ್…….’ ಅಂದ, ಪಾಣಿ ಏನು ಮಾತಾಡಲಿಲ್ಲ. ಬನ್ ಪ್ಯಾಕೇಟ್ ಅವನ ಕೈಗಿಟ್ಟು. “ಥ್ಯಾಂಕ್ಸ್ ನಿನ್ನ ನಾನ್ ಯವತ್ತೂ ಮರೆಯೊಲ್ಲ” ಅಂತ ಪಾಣಿ ಆ ಹುಚ್ಚನ ಕಡೆ ಸಣ್ಣ ನಗು ಬೀರಿದ. ಮತ್ತೆ ದೇವಸ್ಥಾನದ ಮುಂದೆ ಬಂದು ಕೈ ಮುಗಿದು ನಿಂತುಕೊಂಡ, ಪ್ರತೀ ದಿವಸ

“ದೇವರೆ ನಂಗೆ ಒಳ್ಳೆದು ಮಾಡಪ್ಪ” ಅಂತ ಕೇಳಿಕೊಳ್ತಿದ್ದ ಚಕ್ರಪಾಣಿ ಇವತ್ತು “ಅಮ್ಮಾ ತಾಯಿ ದುರ್ಗಾಪರಮೇಶ್ವರಿ ನನ್ನ ತಾಯಿ ಇನ್ನೂ ನೂರು ವರುಷ ಆಯಸ್ಸು ಕೊಟ್ಟು ಕಾಪಾಡಮ್ಮ” ಅಂತ ಹೇಳೊ ಹೊತ್ತಿಗೆ ಮತ್ತೆ ಕಣ್ಣು ಒದ್ದೆಯಾಯ್ತು. ಮತ್ತೆ ಮನೆ ಕಡೆ ದಾರಿ ಹಿಡಿದ.

ಇವತ್ತು ಅವನಿಗೆ ಯಾವ ಕೊಳ್ಳಿದೆವ್ವದ ಕಾಟವೂ ಇರಲ್ಲಿ. ಆ ಹುಚ್ಚ ಬಗ್ಗೆ, ಆ ಪಾಳು ಮನೆಯ ಬಗ್ಗೆ ಅವನಿಗೆ ಭಯಾ ಇರಲಿಲ್ಲ. ಅಮ್ಮ ವಿಷಯದಲ್ಲಾದ ನನ್ನ ಈ ಬದಲಾವಣೆಗೆ ರಾತ್ರಿ ನನ್ನ ಕನ್ಸಿನಲ್ಲಿ ಬಂದ ಆ ಹುಚ್ಚನೇ ಕಾರಣ, ಅವನ್ ಕಥೆಯೇ ಕಾರಣ ಅಂತ ಎಲ್ಲೋ ಅವನ ಬಗ್ಗೆ ಮನಸಿನಲ್ಲಿ ಸಣ್ಣ ಗೌರವ ಭಾವನೆ ಮೂಡಿತು.

ಯಾವಾಗಿನಂತೆ ಗೇಟ್ ತೆಕ್ಕೊಂಡು ಒಳಗಡೆ ಹೋದ, ಅಮ್ಮ… ಅಮ್ಮಾ….. ಅಂತ ಬಾಗಿಲು ಬಡಿದ, ಒಳಗಡೆಯಿಂದ ಯಾವ ಉತ್ತರವೂ ಬರಲಿಲ್ಲ….. ಗಾಬರಿಯಾಗಿ ಮತ್ತೆ ಜೋರಾಗಿ ಬಾಗಿಲು ಬಡಿಯೋದಕ್ಕೆ ಶುರುಮಾಡಿದ, ಈಗಲೂ ಯಾವ ಉತ್ತರವೂ ಇಲ್ಲ ಎದೆ ಬಡಿತ ಇಮ್ಮಡಿಯಾಯ್ತು….. ಬೆಳಗೆ ಕೇಳಿದ ಹುಚ್ಚನ ಕಥೆ ನೆನಪಾಯ್ತು. ಬಾಗಿಲು ಬಡಿಯೋದು ನಿಲ್ಲಿಸಿ ಹೆದರಿ ನಿಧಾನಕ್ಕೆ ಹಿಂದಕ್ಕೆ ಬಂದ. ಅಷ್ಟು ಹೊತ್ತಿಗೆ ಅಮ್ಮ ಒಳಗಡೆಯಿಂದ ಬಾಗಿಲು ತೆಗೆದ್ರು…. ಇವನಿಗಂತು ಹೋದ ಜೀವ ವಾಪಾಸ್ ಬಂದಹಾಗಾಯ್ತು. ಬಾಗಿಲು ತೆಗೆದ್ರು ಅಮ್ಮ ನ ಮುಖ ನೋಡಿಕೊಂಡು ಅಲ್ಲೇ ನಿಂತಿದ್ದ.

“ಯಾಕೋ ಅಲ್ಲೇ ನಿಂತಿದಿಯ…. ಬಾರೊ “ ಅಂತ ಹೇಳಿ ಅಮ್ಮ ನಿಧಾನಕ್ಕೆ ಒಳಗಡೆ ಹೋದರು. ಅಳು ಬರೋದನ್ನ ತಡೆದು ಕೊಂಡು ಒಳಗಡೆ ಹೋದ. ಇಷ್ಟೆಲ್ಲಾ ರೇಗಾಡಿ ಜಗಳ ಮಾಡಿ ಹೋದ್ರು.ಅಮ್ಮನಿಗೆ ನನ್ನ ಮೇಲೆ ಏನು ಕೋಪ ಇಲ್ಲಾ ಮಾಮೂಲಿಯಾಗೆ ಮಾತಾಡ್ತಾಳೆ ಅನ್ನೋದು ಅವತ್ತು ಅವನು ಜೀವನದಲ್ಲಿ ಮೊದಲ ಬಾರಿ ಯೋಚನೆ ಮಾಡಿದ್ದ.

“ಅಮ್ಮಾ ನನ್ನ ಕ್ಷಮಿಸ್ತೀಯ?????” ಅಂತ ಬಾಗಿಲಲ್ಲೆ ನಿಂತುಕೊಂಡು ಕೇಳಿದ.

“ಇವತ್ತು ಮಾತ್ರೆ ಮರ್ತು ಬಂದ್ಯ???? ಬಿಡು ನನ್ನ ಮಗ ಏನೋ ಅಂತ ನನಗೆ ಗೊತ್ತಿಲ್ವ” ಅಂತ ಅವರಮ್ಮ ಸಣ್ಣಕ್ಕೆ ನಕ್ಕು ಬಿಟ್ಟ್ರು. ಅದನ್ನ ಕೇಳಿದ ಪಾಣಿಗೆ ಅಳು ತಡೀಲಿಲ್ಲ ಸೀದ ಬಂದು ಅಮ್ಮನನ್ನ ಗಟ್ಟಿಯಾಗಿ ತಬ್ಬಿಕೊಂಡು.

“ ಅಮ್ಮ ನನ್ನ ಕ್ಷಮಿಸಮ್ಮ….. ನಾನು ಯಾವತ್ತು ಹೀಗೆ ಮಾಡಲ್ಲ ಅಮ್ಮ…. ನಿಂಗೆ ನೋವಾಗೊ ಹಾಗೆ ನಡ್ಕೊಳೊಲ್ಲ ಅಮ್ಮ…. ನೀನು ಹೇಳಿದ ಹಾಗೆ ಕೇಳ್ತೆನಮ್ಮ” ಅಂತ ಚಿಕ್ಕ ಮಗೂ ಥರ ಗಳಗಳಾಂತ ಅಳೊಕೆ ಶುರು ಮಾಡಿದ. ಇದ್ದಕಿದ್ದ ಹಾಗೆ ಮಗ ತಬ್ಬಿಕೊಂಡು ಅಳೊದು ನೋಡಿ ಅಮ್ಮನೆಗೆ ಏನಾಗ್ತಾ ಇದೆ ಅಂತ ಅರ್ಥವಾಗಲಿಲ್ಲ.

“ಹೇ….. ಪಾಣಿ ಏನಾಯ್ತು….. ಹೋಗ್ಲಿ ಬಿಡೊ….. ನಂಗೆ ಪರ್ವಾಗಿಲ್ಲ ಕಣೊ ಇವಾಗ….. ಮಾತ್ರೆ ನಾಳೆ ತಂದ್ರು ಸಾಕು….. ಇದಕ್ಕೆಲ್ಲಾ ಅಳ್ತಾರ” ಅಂತ ಅಮ್ಮ ಸಮಾಧಾನ ಮಾಡೊಕೆ ಶುರು ಮಾಡಿದ್ರು. ಅವನಿಗೆ ಇದು ಯಾವುದೂ ಕೇಳ್ತಾನೆ ಇಲ್ಲ.

“ನನ್ ಬಿಟ್ಟು ಹೋಗ್ಬೇಡ ಅಮ್ಮ….. ನಿನ್ಬಿಟ್ಟು ಇರೋಕಾಗಲ್ಲ ಅಮ್ಮ ನನಗೆ” ಅಂತ ಮತ್ತೆ ಅಳು ಮುಂದುವರೆಸಿದ. ಅಮ್ಮನಿಗೆ ಏನು ಹೇಳಬೇಕು ಅಂತ ಗೊತ್ತಾಗ್ಲಿಲ್ಲ, ಮಗ ತಬ್ಬಿಕೊಂಡು ಅಳೊದು ನೋಡಿ ಅವಳಿಗೂ ಕಣ್ಣಲ್ಲಿ ನೀರು ತುಂಭಿಕೊಂಡಿತು.

“ನಿನ್ಬಿಟ್ಟು ನಾನೆಲ್ಲೋ ಹೋಗ್ತೀನಿ….. ನಿನ್ ಬಿಟ್ರೆ ನನಗ್ಯಾರಿದರೋ…. ಅಳೊದು ನಿಲ್ಸು ನೀನು” ಅಂದ್ರು.
ಮೆಲ್ಲಗೆ ಅಳು ನಿಲ್ಲಿಸಿ ಚಕ್ರಪಾಣಿ ಬ್ಯಾಗಿಂದ ಮಾತ್ರೆ ತೆಗೆದು

“ತೆಗೋ ಮೊದ್ಲು ಮಾತ್ರೆ ತೆಗೊ….. ಇವತ್ತು ಮರೀದೆ ತಂದಿದಿನಿ…. ಮೂರು ದಿನದಿಂದ ನೋವು ಅಂತಿದಿಯ…. ನಾನು ಹೀಗ್ ಮಾಡ್ಬಾರ್ದಿತ್ತು…. ಇನ್ನಾಯವ್ತ್ತು ಹೀಗೆ ಮಾಡಲ್ಲ ಅಮ್ಮ….” ಅಂತ ಕಣ್ಣಿರು ಒರೆಸಿಕೊಂಡ.

“ಅದಿಕ್ಕೆ ಇಷ್ಟೆಲ್ಲ ಅಳ್ತಾರ…. ನಿನ್ನ ಹೆರೋವಾಗ ಎಂಥಾ ನೋವು ಅನುಭವಿಸಿಲ್ಲ ನಾನು… ಈ ಬೆನ್ನು ನೋವು ನಂಗೆ ಲೆಕ್ಕಾನ???..... ನಂಗೆ ನನ್ನ ನೋವಿನ ಚಿಂತೆ ಅಲ್ಲಾಪ್ಪಾ….. ಮಾತ್ರೆ ತೆಗೊಳದೆ ನಾಳೆ ನೋವು ಜಾಸ್ತಿಯಾಗಿ ಬೆಳಗ್ಗೆ ಏಳೊಕಾಗದೇ ಇರೋ ಪರಿಸ್ಥಿತಿ ಬಂದ್ರೆ…. ನಿಂಗೆ ಅಡುಗೆ ಮಾಡೊದು ಯಾರೊ??? ಸ್ನಾನಕ್ಕೆ ಬಿಸಿನೀರು ಕಾಯಿಸೋದು ಯಾರು???....ಬೆಳಗ್ಗೆ ಎದ್ದು ಕೆಲಸಕ್ಕೆ ಹೋಗೊ ನಿನಗೆ ಏನೂ ತೊಂದರೆ ಆಗಬಾರದು ಅನ್ನೋದು ನನ್ನ ಚಿಂತೆ ಅಷ್ಟೆ”

“ಇಷ್ಟು ವರ್ಷ ನಿಂಗೆ ಎಷ್ಟು ಸರ್ತ್ರಿ ನೋವು ಕೊಟ್ಟಿದಿನಿ, ಎಷ್ಟು ಸಲ ಬಾಯಿಗೆ ಬಂದಹಾಗೆ ಬಯ್ದಿದಿನಿ….. ನನ್ನ ಮೇಲೆ ಸ್ವಲ್ಪಾನು ಕೋಪ ಇಲ್ವೇನಮ್ಮ ನಿನ್ನಗೆ??? ನಾನು ನಿಂಗೆ ತಕ್ಕ ಮಗ ಅಲ್ಲಾ ಅಮ್ಮ ಅಲ್ಲ……”

“ ಏನೊ……. ನೋಡು ತಾಯಿಗೆ ಮಕ್ಕಳ ಮೇಲೆ ಯಾವತ್ತು ಪ್ರೀತಿ ಕಮ್ಮಿಯಾಗಲ್ಲ….. ಅಷ್ಟಕ್ಕೂ ನನ್ನನ್ನ ನನ್ನ ಮಗ ಬಯ್ಯದೆ ಇನ್ನೇನು ಪಕ್ಕದ ಮನೆಯವರ ಮಗ ಬಂದು ಬಯ್ತಾನ???.... ನೀನು ಒಳ್ಳೆ….. ಹೋಗು ಹೋಗಿ ಮುಖ ತೊಳ್ಕೊಂಡು ರೇಡಿಯಾಗು,… ಬೆಳಿಗ್ಗೆನು ಸರಿಯಾಗಿ ತಿಂದಿಲ್ಲ…..ನಿನಗೆ ಇಷ್ಟವಾದ ಪಲ್ಯ ಮಾಡಿದಿನಿ ಊಟ ಮಾಡು ಬಾ….” ಅಂತ ಬರ್ತಾ ಇರೋ ಅಳುವನ್ನ ತಡ್ಕೊಂಡು ಒಳಗಡೆ ಬಂದು, ಮಗ ಎಷ್ಟೊ ವರ್ಷದ ನಂತರ ಚಿಕ್ಕ ಮಗುವಿನ ಥರ ತಬ್ಬಿಕೊಂಡು ಅತ್ತ ಸಂತೊಷಕ್ಕೆ ತಾವು ಮನಸ್ಸು ತುಂಬಾ ಅತ್ತು ಬಿಟ್ಟ್ರು.

ಚಕ್ರಪಾಣಿಗೂ ಕೂಡ ಮನಸಲ್ಲಿ ಇದ್ದದ್ದನೆಲ್ಲಾ ಅಮ್ಮನ ಹತ್ರ ಮಾತಾಡಿ ಮನಃ ಪೂರವಕವಾಗಿ ಕ್ಷಮೆ ಕೇಳಿದ್ರಿಂದ ಮನಸ್ಸು ನಿರಾಳ ಅನ್ನಿಸ್ತು.
***

ಆ ದಿವಸದಿಂದ ಮತ್ಯಾವತ್ತೂ ಚಕ್ರಪಾಣಿ ಅವನ ಅಮ್ಮ ನ ಜೊತೆ ಜಗಳ ಆಡೊದಾಗಲಿ, ಅಮ್ಮನಿಗೆ ಬಯ್ಯೋದಾಗಲಿ ಮಾಡಲಿಲ್ಲ. ಅಮ್ಮನ ಜೊತೆ ಸಂತೋಷವಾಗಿದ್ದ. ಪ್ರತೀ ದಿವಸ ದೇವಸ್ಥಾನದ ಹುಚ್ಚನಿಗೆ ಒಂದು ಪ್ಯಾ ಕ್ ಬನ್ ಕೊಡಿಸ್ತಿದ್ದ, ಹಬ್ಬಕ್ಕೆ ಹೊಸ ಬಟ್ಟೆ ಕೊಡಿಸ್ತಿದ್ದ. ಕಾಲ ಕ್ರಮೇಣ ಆ ಹುಚ್ಚನನ್ನ ಮತ್ತೆ ಹೊಸ ಮನುಷ್ಯನನ್ನಾಗಿಸೊ ಯೋಚನೆಯಲ್ಲಿದ್ದಾನೆ.
ಅವತ್ತು ಅವನಿಗೆ ಬಿದ್ದ ಆ ಪಾಳುಮನೆಯ ಕನಸಿಗೆ ಅವನ ಮನಸ್ಸಿನ ಯೋಚನೆಗಳೆ ಕಾರಣ, ಅವತ್ತು ಸಂಜೆ ಅವನು ನೋಡಿದ ಹುಚ್ಚ, ರಾತ್ರಿ ಆ ಪಾಳುಮನೆಯನ್ನ ನೋಡಿ ಹೆದರಿದ್ದು, ಅಮ್ಮನ ಬೆನ್ನು ನೋವು, ಇವೆಲ್ಲವೂ ಸೇರಿ ಕನಸಿನ ಹಾಗೆ ಕಾಡಿತ್ತು ಅಷ್ಟೆ.

ಮುಂದೆ ಯಾವತ್ತೂ ಅವನಿಗೆ ಆ ಹುಚ್ಚ, ಆ ಮನೆ ಕನಸಿನಲ್ಲಿ ಬರಲಿಲ್ಲ. ಆ ದುರ್ಗಾಪರಮೇಶ್ವರಿಯ ಪೂಜೆ ಮಾಡಿ ಕಟ್ಟಿದ ದಾರದಿಂದಲೆ ಕೆಟ್ಟ ಕನಸುಗಳು ಬೀಳುತಿಲ್ಲ ಅಂತ ಅವನು ನಂಬಿದ್ದ.

“ಮನೆಯಲ್ಲಿರುವ ತಾಯಿ ದೇವರ ಸೇವೆಯ ಮುಂದೆ ಮತ್ಯಾವ ದೇವರ ಸೇವೆಯೂ ದೊಡ್ಡದಲ್ಲ”
ಅಲ್ಲವೇ?????

ನೀವು ನಿಮ್ಮ ಅನಿಸಿಕೆಗಳನ್ನ ಕಾಮೆಂಟ್ ಮೂಲಕ ತಿಳಿಸ ಬಹುದು

ದಯವಿಟ್ಟು ಇದನ್ನ ಪ್ರಯತ್ನಿಸಬೇಡಿ - Please Don't Try This......



(ಚಿತ್ರ ಕೃಪೆ : ಅಂತರ್ಜಾಲ)

ಇಲ್ಲಾ ಸರ್, ಹುಡುಗಿ ಇವನನ್ನ ತಿರುಗಿ ಕೂಡ ನೋಡ್ತಾ ಇರಲಿಲ್ಲ, ಇವನೆ ಇಲ್ಲದೆಲ್ಲ ಕಲ್ಪನೆ ಮಾಡಿಕೊಂಡು ಏನೇನೊ ಹುಚ್ಚು ಹುಚ್ಚಾಗಿ ಆಡ್ತಾ ಇದ್ದ ಸರ್.” ಅಂತ ಹೇಳಿ ಕಾಲೇಜು ಹುಡುಗ ಮಾತು ನಿಲ್ಲಿಸಿದ ಪಕ್ಕದಲ್ಲಿ ಮತ್ತೆರಡು ಕಾಲೇಜು ಹುಡುಗರು ನಿಂತಿದ್ದರು 


ಒಂದು ಆತ್ಮಹತ್ಯೆ ವಿಷಯವಾಗಿ ಮಂಜಿನಕೊಪ್ಪ ಪೋಲಿಸ್ ಸ್ಟೇಷನ್ ನಲ್ಲಿ ಹುಡುಗರ ಸ್ಟೇಟ್ ಮೆಂಟ್ ಗಳು ರೆಕಾರ್ಡ್ ಆಗ್ತಾ ಇತ್ತು. ಸ್ಟೇಷನ್ ಇನ್ಸ್ ಪೆಕ್ಟರ್ ಗಿರೀಶ್ ಸೋಮನಹಳ್ಳಿ ಹಿಂದಿನ ದಿವಸ ಘಾಟಿ ರಸ್ತೆಯಲ್ಲಿ ರಾಗಿ ಕಲ್ಲು ಅನ್ನೊ ಸ್ಪಾಟ್ ಹತ್ರ ಮೇಲಿಂದ ಕೆಳಗೆ ಪ್ರಪಾತಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ವಸಂತ್ ಅನ್ನೊ ಹುಡುಗನ ಆತ್ಮಹತ್ಯೆಯ  ಬಗ್ಗೆ ಇನ್ವೆಸ್ಟಿಗೇಷನ್ ಮಾಡ್ತಾ ಇದ್ರು.
           
     “ಅವನು ಸಾಯೋಕ್ ಮುಂಚೆ ಹುಡುಗಿಗೋಸ್ಕರ ಸಾಯ್ತಾಇದಿನಿ ಅಂತ ಕ್ಲಿಯರ್ ಆಗಿ ಹೇಳ್ಬಿಟ್ಟು ಸತ್ತಿದಾನೆ, ನೀವು ನೋಡಿದ್ರೆ ಏನು ಇಲ್ಲಾ ಅಂತ ಹೇಳ್ತಾ ಇದಿರ,… ನಿಜ ಹೇಳಿ ಏನು ಅಂತ”  ಇನ್ಸ್ ಪೆಕ್ಟರ್ ಗಿರೀಶ್ ಹುಡುಗರನ್ನ ಮತ್ತೆ ಪ್ರಶ್ನೆ ಮಾಡ್ತ ಪಕ್ಕದ ಟೇಬಲ್ ಮೇಲೆ ಪ್ಲಾಸ್ಟಿಕ್ ಕವರ್ ನಲ್ಲಿದ್ದ ಒಂದು ಹ್ಯಾಂಡಿಕ್ಯಾಮ್ ಕೈಗೆತ್ತಿಕೊಂಡ್ರು.

ನಿಜವಾಗಲೂ ಹೇಳ್ತಾ ಇದಿನಿ ಸರ್, ನೀವು ಹೇಳ್ತಾ ಇರೊ ಹುಡುಗಿ ವಸಂತ್ ನನ್ನ ಪ್ರೀತಿ ಮಾಡ್ತಾ ಇದ್ಲು ಅನ್ನೋದು ಅವನ ಕಲ್ಪನೆಯಾಗಿತ್ತು ಅಷ್ಟೆ, ಅವನು ಅವಳ ವಿಷಯದಲ್ಲಿ ತುಂಬಾನೆ ಹುಚ್ಚುಚ್ಚಾಗಿ ಆಡ್ತಾ ಇದ್ದ ಸರ್, ಯಾವಗ್ಲೊ ಒಂದು ಸರ್ತಿ ಅವಳು ಕಾಲೇಜ್ ನಲ್ಲಿ ಸ್ಮೈಲ್ ಕೊಟ್ಟಿದ್ದು, ಇನ್ಯಾವತ್ತೊ ಬಸ್ ನಲ್ಲಿ ಇವನು ಸೀಟ್ ಬಿಟ್ಟು ಕೊಟ್ಟಿದಕ್ಕೆ ಅವಳು ಥಾಂಕ್ಸ್ ಹೇಳಿದ್ದು, ಥರದ್ದು ಬಿಟ್ರೆ ಅವಳಿಗೆ ಇವನು ಯಾರು ಅಂತಾನೆ ಗೊತ್ತಿರ್ಲಿಲ್ಲ ಸರ್, ಪ್ರತಿ ದಿವಸ ಕಾಲೇಜ್ ನಲ್ಲಿ ಅವಳನ್ನ ನೋಡಿಕೊಂಡು ಅವಳ ಪ್ರತಿಯೊಂದು ಹಾವಭಾವಕ್ಕೂ ಇವನೆ ಏನೇನೊ ಕಲ್ಪಿಸಿಕೊಂಡು, ಅವಳು ಅವನನ್ನ ಪ್ರೀತಿಸ್ತಾ ಇದಾಳೆ ಅಂತ ಅಂದು ಕೊಂಡಿದ್ದ ಸರ್, ಅವನ ಎದೆ ಮೇಲೆ ಅವಳ ಹೆಸರು ಬೇರೆ ಹಚ್ಚೆ ಹಾಕಿಸಿಕೊಂಡಿದ್ದ, ರಕ್ತದಲ್ಲಿ ಕಾಗದ ಬರೆಯೋದು ಇನ್ನೊಂದು ಮತ್ತೊಂದು ಅಂತ ಏನೆನೊ ಮಾಡ್ತಾ ಇದ್ದ. ನಾವೆ ಎಷ್ಟೊಸಲ ಇದೆಲ್ಲ ಬೇಡ ಕಣೊ ಅಂತ ಹೇಳಿದ್ವಿ, ನಮ್ ಮಾತೆ ಕೇಳ್ತಿರ್ಲಿಲ್ಲ ಸರ್”  ಅಂತ ಮಾತು ಮುಗಿಸಿ ಹುಡುಗ ಇನ್ಸ್ ಪೆಕ್ಟರ್ ಮುಖ ನೋಡ್ತಾ ನಿಂತ.

ಆತ್ಮಹತ್ಯೆ ಮಾಡಿಕೊಂಡಿದ್ದ ಹುಡುಗ ವಸಂತ್ ತಂದೆ ಪರಮೇಶ್ವರಮೂರ್ತಿಗಳು, ಅಲ್ಲೆ ಪಕ್ಕದಲ್ಲಿ ನಿಂತು ಹುಡುಗರ ಮಾತನ್ನ ಕೇಳಿಸಿಕೊಳ್ತಾ ಇದ್ರು, ಸತ್ತ ಮಗನನ್ನ ನೆನೆಸಿಕೊಂಡು ಅತ್ತು ಅತ್ತು ಕಣ್ಣುಗಳು ಊದಿಕೊಂಡು ಕೆಂಪಾಗಿದ್ದುವು.
             
   “ಸರ್, ಹುಡುಗರ ಮಾತು ಕೇಳಿದ್ರಲ್ವ ನೀವು ಏನು ಹೇಳ್ತೀರ?” ಅಂತ ಗಿರೀಶ್ ಪರಮೇಶ್ವರ ಮೂರ್ತಿಗಳನ್ನ ಕೇಳಿದ್ರು

ನಿಟ್ಟುಸಿರು ಬಿಟ್ಟ ಮೂರ್ತಿಗಳುಏನು ಹೇಳೊದು ಸರ್, ಇವರ್ ಮಾತು ಸತ್ಯ ಹೌದೊ ಅಲ್ವೊ ಅಂತ ಹೇಗೆ ಹೇಳಲಿ, ನಿಮ್ಮೆಲ್ಲರ ಕಣ್ಣಿಗೆ ನನ್ನ ಮಗ ಸತ್ತಿದ್ದು ನೆನ್ನೆ, ಆದರೆ ಅವನು ನಮ್ಮ ಕೈ ತಪ್ಪಿ 2 ವರ್ಷ ಆಗಿತ್ತು ಸರ್

ಅಲ್ಲಿದ್ದವರಿಗೆ ಅವರ ಮಾತುಗಳು ಅರ್ಥವಾಗಲಿಲ್ಲ, ಅಷ್ಟು ಹೊತ್ತಿಗೆ ಒಬ್ಬ ಪೋಲಿಸ್ ಕಾನ್ ಸ್ಟೇಬಲ್ ಬಂದು

ಸರ್, ಸುಸೈಡ್ ಸ್ಪಾಟ್ ನಲ್ಲಿ ಒಂದು ಶೂ ಸಿಕ್ಕಿದೆಅಂತ, ಒಂದು ಪ್ಲಾಸ್ಟಿಕ್ ಕವರ್ ಇನ್ಸ್ ಪೆಕ್ಟರ್ ಗೆ ಕೊಟ್ಟ

ಹೆಣ ಇನ್ನೂ ಸಿಕ್ಕಿಲ್ವ?” ಅನ್ನೊ ಗಿರೀಶ್ ಪ್ರಶ್ನೆಗೆ

ಇಲ್ಲ ಸರ್, ಸ್ಪಾಟ್ ತುಂಬಾನೆ ಡೇಂಜರಸ್, ಕೆಳಗಡೆ ಆಳ ನೋಡಿದ್ರೆ ಎಂಥವನಿಗೂ ಎದೆ ಝಲ್ ಅನ್ನುತ್ತೆ, ಆದ್ರು ಹಗ್ಗ ಕಟ್ಟಿ ಸ್ವಲ್ಪ ದೂರ ಇಳಿಯೋಕೆ ನೋಡಿದ್ವಿ ಶೂ ಬಿಟ್ರೆ ಮತ್ತೇನು ಸಿಕ್ಕಿಲ್ಲ, ನಂಗೆ ಅನಿಸೋ ಪ್ರಕಾರ ಹೆಣ ಇನ್ನೂ ಕೆಳಗಡೆ ಬಿದ್ದು ಬಿಟ್ಟಿದೆಅಂದ

ಕೆಳಗಡೆ ಅಂದ್ರೆ, ಕೆಳಗಡೆ ಫಾರೆಸ್ಟ್ ? ಅಂತ ಗಿರೀಶ್ ಮತ್ತೆ ಪ್ರಶ್ನೆ ಮಾಡಿದ.

ಹೌದು ಸರ್ ಕೆಳಗಡೆ ಫಾರೆಸ್ಟ್ ನಲ್ಲಿ ದೇವತೀರ್ಥ ಅಂತ ಒಂದು ಚಿಕ್ಕ ನದಿ ಹರಿಯುತ್ತೆ, ಹಿಂದೆ 2 ಸುಸೈಡ್ ಕೇಸ್ ನಲ್ಲಿ ಹೆಣ ಸಿಕ್ಕಿದ್ದು ಅಲ್ಲೆ, ರಿಸರ್ವ್ಡ್ ಫಾರೆಸ್ಟ್ ಬೇರೆ ಆಗಿರೋದ್ರಿಂದ ಒಳಗಡೆ ಹೋಗೊದಿಕ್ಕೆ ಪರ್ಮಿಷನ್ ಬೇಕಾಗುತ್ತೆ ಸರ್, ಅದೂ ಅಲ್ಲದೆ ನಾವು ಯಾವುದಕ್ಕೂ ತಡ ಮಾಡೊ ಹಾಗಿಲ್ಲ ಲೇಟಾದ್ರೆ ಹೆಣನ ಕಾಡು ಪ್ರಾಣಿಗಳು ತಿಂದುಕೊಂಡು ಹೋದ್ರೆ ಅದೂ ಇಲ್ಲಾ ಅಂತ ಆಗ್ಬಿಡುತ್ತೆ ಸರ್, ಸಿಕ್ಕಾಪಟ್ಟ ಮಳೆ ಬೇರೆಅಂತ ಪರಿಸ್ಥಿತಿಯನ್ನ ವಿವರಿಸುತ್ತ ಮುಂದಿನ ಆರ್ಡರ್ ಗೆ ಕಾಯ್ತಾ ನಿಂತ.

ಸರಿ ರೇಂಜ್ ಆಫಿಸರ್ ಮಹದೇವಪ್ಪನಿಗೆ ಫೊನ್ ಮಾಡಿ ವಿಷ್ಯ ತಿಳ್ಸಿ ಒಂದು ಅರ್ಧಗಂಟೆಲಿ ಹೊರಡೋಣಅಂತ ಅವನನ್ನ ಕಳುಹಿಸಿದ, ಮತ್ತೆ ಮೂರ್ತಿಗಳತ್ತ ತಿರುಗಿ

ಇದು ನಿಮ್ಮ ಮಗಂದೇನ ಸರ್ಅಂತ ಪ್ಲಾಸ್ಟಿಕ್ ಕವರ್ ನಿಂದ ಶೂ ಹೊರಗಡೆ ತೆಗೆದ. ಶೂ ನೋಡಿದ ಮೂರ್ತಿಗಳಿಗೆ

ಹೌದು ಸರ್ಅಂತ ಹೇಳುವ ಹೊತ್ತಿಗೆ ದುಃಖ ಒತ್ತರಿಸಿಕೊಂಡು ಬಂತು, ಮುಖಕ್ಕೆ ಕೈ ಹಿಡಿದುಕೊಂಡು ಅಳುವನ್ನ ತಡೆಯೊ ಪ್ರಯತ್ನವನ್ನ ಮಾಡಿದ್ರು.

ಒಂದು ಅರ್ಧಗಂಟೆನಲ್ಲಿ ನಾವು ಸ್ಪಾಟ್ ಹತ್ರ ಹೊರಡ್ತಾ ಇದಿವಿ, ನಿಮ್ಮ ಮಗನ ಬಗ್ಗೆ ಏನೊ ಹೇಳ್ತಾ ಇದ್ರಿ, ಅದನ್ನ ಕಂಪ್ಲೀಟ್ ಮಾಡಬಹುದ ಸರ್?” ದುಃಖದಲ್ಲಿರೊ ಅವರನ್ನ ಕೆಣಕೋ ಇಷ್ಟ ಇಲ್ಲದೇ ಇದ್ದರೂ ತನಿಖೆಗೋಸ್ಕರವಾದರೂ ಇನ್ಸ್ಪೆಕ್ಟರ್ ಗೆ ಅದನ್ನ ಕೇಳಲೇ ಬೇಕಿತ್ತು.

ಶೂ ನೊಡಿದ್ರಲ್ವ ಸರ್…. ಇದಿಕ್ಕೆ ಮೂರು ಸಾವಿರ ರುಪಾಯಿಮತ್ತೆ ಎಲ್ಲರ ಮುಖದಲ್ಲೂ ಹಳೆ ಪ್ರಶ್ಣಾರ್ಥಕ ಚಿಹ್ನೆ, ಮೂರ್ತಿಗಳು ಮತ್ತೆ ಮುಂದುವರೆಸಿಕೊಂಡು

ನಂಗೆ 2 ಜನ ಮಕ್ಕಳು, ದೊಡ್ಡವನು ವಸಂತ, ಚಿಕ್ಕವನು ಅರವಿಂದ. ವಸಂತ SSLC ಎಕ್ಸಾಮ್ ನಲ್ಲಿ ಅವನ ಶಾಲೆಗೆ ಸೆಕೆಂಡ್ ಪ್ಲೇಸ್ ಬಂದಿದ್ದ, ಅಲ್ಲಿ ತನಕ ಎಲ್ಲವು ಸರಿಯಾಗಿತ್ತು. ಆದರೆ ಅವ್ನು ಕಾಲೇಜು ಸೇರಿ ಎರಡು ತಿಂಗಳಲ್ಲಿ, ಸಂಪೂರ್ಣವಾಗಿ ಬದಾಲಾಗಿ ಬಿಟ್ಟಿದ್ದ. ಓದೋದಕ್ಕಿಂತ ಹೆಚ್ಚಾಗಿ ಶೋಕಿ ಮಾಡೊದಿಕ್ಕೆ ಅಂತಾನೆ ಕಾಲೇಜಿಗೆ ಹೋಗೊ ರೀತಿನಲ್ಲಿ ಹೋಗ್ತಿದ್ದ, ಅವನಿಗೆ ಎಲ್ಲಾವೂ ಬ್ರಾಂಡೆ ಡ್ ಬೇಕಾಗಿತ್ತು ಸರ್, ಬ್ರಾಂಡೆಡ್ ಶರ್ಟ್, ಪ್ಯಾಂಟ್, ಬ್ರಾಂಡೆಡ್ ಶೂ, ತಿಂಗಳಿಗೊಂದು ಮೊಬೈಲ್ ಹ್ಯಾಂಡ್ ಸೆಟ್, ಅದಕ್ಕೆ ಕರೆನ್ಸಿ. ಕರೆನ್ಸಿ ಅಂತು ಹಾಕಿಸಿ, ಹಾಕಿಸಿ, ಒಂದೊಂದು ಸರ್ತಿ ತಿಂಗಳಕೊನೆಗೆ ನನ್ನ ಕೈ ಪೂರ್ತಿ ಖಾಲಿ ಆಗ್ತಾ ಇತ್ತು. ಎಷ್ಟು ಹೇಳಿದ್ರು ಮಾತೆ ಕೇಳ್ತಿರ್ಲಿಲ್ಲ ಸರ್, ಓದೊದ್ರಲ್ಲೂ ಹಿಂದೆ ಬಿದ್ದಿದ್ದ, ತುಂಬಾನೆ ಹಠಮಾರಿಯಾಗಿದ್ದ, ಸಿಕ್ಕಿದಕ್ಕೆಲ್ಲ ಸಿಟ್ಟು ಮಾಡಿಕೊಳ್ಳೊದು, ಅವನ ಅಮ್ಮನ ವಿಷಯಕ್ಕೆ ಕೈ ಎತ್ತೊವರೆಗು ಹೋಗಿದ್ದ, ಆದರೂ ನಮ್ಮ ಮಗಾ ಅಂತ ಸುಮ್ಮನಿದ್ವಿ, ಜವಾಬ್ದಾರಿ ಬರುತ್ತೆ ಅಂತ ಕಾದ್ವಿ ಎಷ್ಟೊ ಸರ್ತಿ ನನ್ನ ಚಿಕ್ಕ ಮಗನ ಆಸೆ ಬಲಿಕೊಟ್ಟು ಇವನಿಗೆ ಖರ್ಚು ಮಾಡ್ತಿದ್ದೆ, ಮಿಡಲ್ ಕ್ಲಾಸ ಫ್ಯಾಮಿಲಿ ಸರ್ ನಮ್ದು ಏನ್ ಮಾಡ್ತೀರ, ಯಾವ ವಿಷಯಾನು ನಮ್ ಹತ್ರ ಹೇಳ್ತಿರ್ಲಿಲ್ಲ, ಮನೆಗೆ ಬಂದ್ರೆ ಟಿ.ವಿ. ರೂಮ್ ನಲ್ಲಿ ಕಂಪ್ಯೂಟರ್ ಅದು ಏನು ಮಾಡ್ತಿದ್ದನೋ ಗೊತ್ತಾಗ್ತಿರ್ಲಿಲ್ಲ ಸರ್. ಹೀಗಿರೊವಾಗ ಹುಡುಗಿ, ಪ್ರೀತಿ ಹುಚ್ಚಾಟಗಳೆಲ್ಲ ಹೇಗ್ ಸರ್ ಗೊತ್ತಾಗ್ಬೇಕು?” ಅಂತ ಮೂರ್ತಿಗಳು ಮತ್ತೆ ಅಳೊಕೆ ಶುರು ಹಚ್ಚಿಕೊಂಡ್ರು ಸರ್ತಿ ಅವರ ಅಳುವನ್ನ ಕಂಟ್ರೋಲ್ ಮಾಡೊದಿಕ್ಕೆ ಅವರಿಂದ ಸಾಧ್ಯವಾಗಲಿಲ್ಲ.

ಅವರ ಅಳು ಬಿಟ್ಟರೆ ಎಲ್ಲವೂ ಮೌನವಾಗಿತ್ತು, ಮೌನವನ್ನ ಮುರಿಯಿವ ಹಾಗೆ ಒಬ್ಬ ಕಾನ್ಸ್ ಸ್ಟೇಬಲ್ ಬಂದು,

ಸರ್ ಆಲ್ ಮೋಸ್ಟ್ ಎಲ್ಲಾ ರೆಡಿ ಇದೆ, ನೀವು ಯೆಸ್ ಅಂದ್ರೆ ಹೊರಡಬಹುದು ಸರ್ಅಂದ, ಹೊರಡೊಣ ಅನ್ನೊ ಕೈಸನ್ನೆ ಮಾಡಿದ ಇನ್ಸ್ ಪೆಕ್ಟರ್ ಮೂರ್ತಿಗಳ ಹತ್ತಿರ

ಸಮಾಧಾನ ಮಾಡ್ಕೊಳಿ ಸರ್, ನಾವು ಇನ್ನೇನು ಸ್ಪಲ್ಪ ಹೊತ್ತಲ್ಲಿ ಹೊರಡ್ತೀವಿ, ಡೆಡ್ ಬಾಡಿ ಸಿಕ್ಕಿದ ತಕ್ಷಣ ನಿಮಗೆ ವಿಷಯ ತಿಳಿಸ್ತೀವಿ, ನೀವು ಈಗ ಮನೇಗ್ ಹೋಗಬಹುದು ಧೈರ್ಯ ತೆಗೊಳಿ,” ಅಂತ ಗಿರೀಶ್ ಮುಂದಿನ ಕೆಲಸಕ್ಕೆ ಸಿದ್ದವಾದರು. ಕಣ್ಣು ಒರೆಸಿಕೊಂಡು ಒಂದು ಸಣ್ಣ ನಮಸ್ಕಾರ ಮಾಡಿ ಮೂರ್ತಿಗಳು ಅಲ್ಲಿಂದ ಹೊರ ಬಿದ್ದರು, ಅಲ್ಲಿದ ಕಾಲೇಜು ಹುಡುಗರು ಅವರ ಸ್ಟೇಟ್ ಮೆಂಟ್ ಗೆ ಸಹಿಹಾಕಿ ಅವರು ಕೂಡ ಮನೆ ದಾರಿ ಹಿಡಿದ್ರು.

ಅಷ್ಟಕ್ಕು ಹಿಂದಿನ ದಿವಸ ಏನಾಗಿತ್ತು, ವಸಂತ ಆತ್ಮಹತ್ಯೆ ಮಾಡಿಕೊಂಡೊದ್ದ ಯಾಕೆ?

ಬನ್ನಿ ನೋಡೋಣ….

ಎರಡು ದಿವಸದಿಂದ ಮಳೆ ಕಮ್ಮಿ ಇದೆ ಅಂತ ಪರಮೇಶ್ವರ ಮೂರ್ತಿಗಳು ಮಲ್ಲಿಕಟ್ಟೆಯಲ್ಲಿರೊ ಅವರ ಕುಲದೇವರ ದರ್ಶನಕ್ಕೆ ಹೊರಟಿದ್ರು, ಮಂಜಿನಕೊಪ್ಪದಿಂದ ಮೂರು ನಾಲ್ಕು ಗಂಟೆ ಪ್ರಯಾಣ ಹಾಗಾಗಿ, ಕೆಲಸಕ್ಕೆ ಇಡಿ ದಿವಸ ರಜಹಾಕಿ ಟಾಕ್ಸಿನಲ್ಲಿ ಹೋಗಿಬರೊ ಸಿದ್ದತೆ ಮಾಡಿಕೊಂಡಿದ್ರು. ಆದ್ರೆ ರಾತ್ರಿಯಿಂದ ನಿಂತಿದ್ದ ಮಳೆ ಮತ್ತೆ ಶುರುವಾಗಿತ್ತು, ಇಷ್ಟೆಲ್ಲ ಸಿದ್ದತೆ ಮಾಡಿಕೊಂಡು ನಿಲ್ಲಿಸೋದು ಬೇಡ, ಹೋಗ್ಬಿಟ್ಟು ಬರೋದೆ ಅಂತ ನಿರ್ಧರಿಸಿಕೊಂಡು ಹೊರಡುತ್ತಾ ಇದ್ರು. ಚಿಕ್ಕಮಗ ಆಗಲೆ ಶಾಲೆಗೆ ಹೋಗಿದ್ದ, ವಸಂತ ಇನ್ನೂ ಮನೇಲಿದ್ದ, ಎಲ್ಲರಿಗಿಂತ ಮುಂಚೆ ಕಾಲೇಜಿಗೆ ಹೋಗೊನು, ಆದ್ರೆ ಇವತ್ತು ಮಾತ್ರ ಬೆಳಗ್ಗೆ ಇಂದ ಅವನ ರೂಮ್ ನಿಂದ ಹೊರಗೆ ಬಂದೇ ಇರ್ಲಿಲ್ಲ. ಇದನ್ನೆ ಯೋಚನೆ ಮಾಡ್ತ ಇದ್ದ ಮೂರ್ತಿಗಳು ಸ್ವಲ್ಪ ಸಮಯ ಇದೆ ಅಂತ ಟಿ.ವಿ ಆನ್ ಮಾಡಿದ್ರು, ಮಾಮೂಲಿ ಮಳೆ ನ್ಯೂಸ್, ಅದರೆ ಜೊತೆಗೆ ಮತ್ತೊಂದು ಸುದ್ದಿ, ಹಿಂದಿನ ದಿನ ಗಿರಿಸಾಗರದ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಎದುರು ಒಂದಷ್ಟು ಜನ ಸೇರಿಕೊಂಡು ದೊಂಬಿ ಎಬ್ಬಿಸಿ, ಕಿಟಕಿ ಗಾಜು ಪುಡಿಮಾಡಿ, ಡಾಕ್ಟರ್ ಗಳನ್ನ ಹೊರಗೆಳೆದು ರಾದ್ದಾಂತ ಆಗಿತ್ತು. ಗಿರಿಸಾಗರದ ಒಂದು ಕಾಲೇಜು ಹುಡುಗಿಯನ್ನ ಜ್ವರ ಅಂತ ಆಸ್ಪತ್ರೆಗೆ ಸೇರಿಸಿದ್ರು, ಆದರೆ ತಪ್ಪಾದ ಟ್ರೀಟ್ ಮೆಂಟ್ ನಿಂದ ನೆನ್ನೆ ಮಧ್ಯಾಹ್ನ ಅವಳು ಸತ್ತು ಹೋಗಿದ್ಲು. ವಿಷಯವಾಗೆ ಆಸ್ಪತ್ರೆಯಲ್ಲಿ ದೊಡ್ಡ ಗಲಾಟೆನೆ ನಡೆದಿತ್ತು. ಹಾಗಾಗಿ ಇವತ್ತು ಗಿರಸಾಗರದ ಕಾಲೇಜಿಗೆ ಶೋಕಾರ್ಥವಾಗಿ ರಜೆ ಸಾರಿದ್ರು. ನ್ಯೂಸ್ ನೋಡಿದ ಮೂರ್ತಿಗಳಿಗೆ ಈಗ ಕಾರಣ ಗೊತ್ತಾಯ್ತು, ರಜ ಅಂತ ಅವನು ಕಾಲೇಜಿಗೆ ಹೋಗಿಲ್ಲ ಅಂದು ಕೊಂಡ್ರು.

ಆದ್ರೆ ಅವನ ರೂಂ ಒಳಗಿನ ಸತ್ಯಾನೆ ಬೇರೆ,

 ವಸಂತ್ ರಾತ್ರಿಯೆಲ್ಲ ನಿದ್ದೇನೆ ಮಾಡಿರ್ಲಿಲ್ಲ, ಕಣ್ಣುಗಳು ಸೊರಗಿ ಹೋಗಿದ್ವು, ಹಿಂದಿನ ದಿವಸ ಆಸ್ಪತ್ರೆಯಲ್ಲಿ ತಪ್ಪು ಟ್ರೀಟ್ ಮೆಂಟ್ ನಿಂದ ಸತ್ತು ಹೋಗಿದ್ದ ಹುಡುಗಿಯ ಫೊಟೊವನ್ನ ಕೈಯಲ್ಲಿ ಹಿಡಿದುಕೊಂಡು ರಾತ್ರಿಯೆಲ್ಲ ಹುಚ್ಚನ ರೀತಿ ಅತ್ತಿದ್ದ. ಸಿಗರೇಟ್ ಅಭ್ಯಾಸ ಇದ್ದರೂ, ಅಲ್ಲಿಯ ತನಕ ಅದು ಮನೆಯ ಬಾಗಿಲು ದಾಟಿರಲಿಲ್ಲ ಆದರೆ ಅವತ್ತು ಒಂದೇ ರಾತ್ರಿ 3 ಪ್ಯಾಕೇಟ್ ಸಿಗರೇಟ್ ಖಾಲಿ ಮಾಡಿದ್ದ, ಎದೆಯ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದ ಹುಡುಗಿಯ ಹೆಸರನ್ನ ತಾನೆ ಸಿಗರೇಟ್ ನಲ್ಲಿ ಸುಟ್ಟು ಕೊಂಡಿದ್ದ.

ಹೊರಡೋ ಹೊತ್ತಿಗೆ ಮೂರ್ತಿಗಳು ಅವನನ್ನ ಕರೆದ್ರು, ನಿದ್ದೆಯಿಂದ ಎದ್ದು ಬಂದವನಂತೆ ಹೊರಗಡೆ ಬಂದು ನಿಂತ.

ಮನೆ ಬಾಗಿಲು ಹಾಕೊ, ಮಲ್ಲಿಕಟ್ಟೆ ದೇವಸ್ಥಾನಕ್ಕೆ ಹೋಗಿ ಬರ್ತೀವಿ, ನಾನು ಹೋದ ಮೇಲೆ ಮತ್ತೆ ಮಲಗಬೇಡ ಏನಾದ್ರು ಉಪಯೋಗಕ್ಕೆ ಬರೊ ಕೆಲಸ ಇದ್ರೆ ಮಾಡುಅಂತ ಮೂರ್ತಿಗಳು ಗಡುಸಾಗಿ ಅವನಿಗೆ ಹೇಳಿ ಹೊರಡೋಕೆ ಸಿದ್ದವಾದ್ರು.

ಅಪ್ಪ…….”

ಎಷ್ಟೊ ವರ್ಷಗಳ ನಂತರ ಸೌಮ್ಯವಾಗಿ ವಸಂತ ಅಪ್ಪಾ ಅಂತ ಕರೆದಿದ್ದು ಕೇಳಿ, ಮೂರ್ತಿಗಳು ಒಂದು ಕ್ಷಣ ಆಶ್ಚರ್ಯದಿಂದ ಅಲ್ಲೆ ನಿಂತು ಬಿಟ್ಟರು. ಮುಂದೆ ಮುಂದೆ ಹೊರಟಿದ್ದ ವಸಂತನ ಅಮ್ಮಾನು ತಿರುಗಿ ನಿಂತ್ರು.

ಅಪ್ಪಾ, ನಾನು ಕೂಡ ದೇವಸ್ಥಾನಕ್ಕೆ ಬರ ಬಹುದ? ಯಾಕೊ ನಾನು ಇವತ್ತು ಒಂಟಿ ಅಂತ ಅನ್ನಿಸ್ತಿದೆ

ವಸಂತನ ಮಾತು ಕೇಳಿ ಅವನ ಅಪ್ಪ ಅಮ್ಮನಿಗೆ ಮಾತೆ ಹೊರಡಲಿಲ್ಲ, 2 ವರ್ಷದ ಹಿಂದೆ ಕಳೆದು ಹೋದ ನಮ್ಮ ಮಗ ಮತ್ತೆ ಸಿಕ್ಕಿದ ಅನ್ನೊ ಖುಷಿಯಾಯ್ತು. ಬೇಗ ಬೇಗ ಸ್ನಾನ ಮಾಡಿ ಅವರ ಜೊತೆ ಅವನೂ ಹೊರಟ. ಮಗ ಸರಿ ಹೋದ ಅನ್ನೊ ಖುಷಿಯಿಂದ ಅಪ್ಪ, ಅಮ್ಮ ನೆಮ್ಮದಿಯಾಗಿ ಕುಲದೇವರ ದರ್ಶನ ಮುಗಿಸಿಕೊಂಡರು.

 ಹಿಂದಿರುಗೋ ದಾರಿ ಘಾಟಿ ರಸ್ತೆ, ಅಲ್ಲಿ ರಾಗಿ ಕಲ್ಲು ಅನ್ನೊ ಸ್ಪಾಟ್ ಇದೆ. ಅಲ್ಲಿ ನಿಂತು ಫೊಟೊ ತೆಗೆಯೋದೆ ಒಂದು ಮಜ, ಹಾಗಂತ ಸ್ವಲ್ಪ ಎಚ್ಚರ ತಪ್ಪಿದ್ರು ಅಷ್ಟೆ ಅಪಾಯಕಾರಿ, ಅಲ್ಲಿಗೆ ಇವರು ಬರೋಹೊತ್ತಿಗೆ ಸಂಜೆ ಆಗಿತ್ತು ಮಳೆ ಶುರುವಾಗಿ ಚಳಿಹಿಡಿಸಿ ಬಿಟ್ಟಿತ್ತು. ಮುಂದೆ ದಾರಿ ಕಾಣದಷ್ಟು ದಟ್ಟವಾಗಿ ಮಂಜು ತುಂಬಿಕೊಂಡಿತ್ತು

ಕೈಯಲ್ಲಿ ಹ್ಯಾಂಡಿ ಕ್ಯಾಮ್ ಹಿಡಿದ ವಸಂತ್

ಅಪ್ಪ ಒಂದು ಐದು ನಿಮಿಷ ನಿಲ್ಲಿಸಿ, ಇಲ್ಲೆ ಸ್ವಲ್ಪ ವಿಡಿಯೋ ತೆಗೆದು ಬರ್ತೀನಿಮೂರ್ತಿಗಳು ಹಿಂದೆ ಮುಂದೆ ಯೋಚನೆ ಮಾಡದೆ ಟಾಕ್ಸಿ ನಿಲ್ಲಿಸಿದ್ರು, ಮಗನ ಜೊತೆ ಇಳಿಯೋದಿಕ್ಕೆ ತಯಾರಾದ್ರು.

ತುಂಬಾ ಚಳಿ ಅಪ್ಪ, ಮಳೆ ಬೇರೆ ಬರ್ತಾ ಇದೆ ನೀವು ಇಲ್ಲೆ ಇರಿ, ಐದೇ ನಿಮಿಷಅಂತ ಅಂದಾಗ ಮೂರ್ತಿಗಳು ಏನು ಹೇಳದೆ ತಲೆ ಅಲ್ಲಾಡಿಸಿ ವಾಪಾಸ್ ಕಾರಿನ ಬಾಗಿಲು ಹಾಕಿಕೊಂಡ್ರು, ಮಗ ಹಿಂದಿನಂತಾದ ಅನ್ನೊ ಖುಷಿಗೆ ಅವರು ಯಾವುದಕ್ಕೂ ಸಿದ್ದವಾಗಿದ್ರು.

ಕಾರಿಂದ ದೂರಕ್ಕೆ ಅವರಿಗೆ ಕಾಣದೇ ಇರೊ ಜಾಗಕ್ಕೆ ಬಂದ ವಸಂತ್, ಮತ್ತೆ ಜೋರಾಗಿ ಅಳೋದಕ್ಕೆ ಶುರು ಮಾಡಿದ, ಪರ್ಸ್ ನಿಂದ ಹುಡುಗಿ ಪೋಟೊ ಹೊರಗಡೆ ತೆಗೆದು ಸ್ವಲ್ಪ ಹೊತ್ತು ನೋಡುತ್ತಾ ನಿಂತ, ಕೈಯಲ್ಲಿದ್ದ ಹ್ಯಾಂಡಿ ಕ್ಯಾಮ್ ಓನ್ ಮಾಡಿ ತನ್ನ ಮುಖದ ಮುಂದೆ ಹಿಡಿದು ಅವನ ಮಾತು ಗಳ ವೀಡಿಯೋ ರೆಕಾರ್ಡಿಂಗ್ ಶುರು ಮಾಡಿದ

ಅಪ್ಪ, ಅಮ್ಮ, ಅರವಿಂದು, ಸಾರಿ…. ಅವಳು ನನ್ನನ್ನ ಒಂಟಿ ಮಾಡ್ಬಿಟ್ಟು ಹೋದ್ಲು, ಅವಳನ್ನ ಬಿಟ್ಟು ಬದುಕೋ ಶಕ್ತಿ ನನಗೆ ಇಲ್ಲ, ಅವಳ ಜೊತೆ ನಾನು ಹೋಗೊ ನಿರ್ಧಾರ ಮಾಡ್ಬಿಟ್ಟಿದೀನಿ, ನನ್ನ ಪ್ರೀತಿ ಅಮರಅಂತ ಹೇಳಿ ಅವಳ ಫೊಟೊವನ್ನೂ ಹ್ಯಾಂಡಿಕ್ಯಾಮ್ ಅನ್ನು ಪಕ್ಕದ ಕಲ್ಲಿನ ದಂಡೆಯ ಮೇಲಿಟ್ಟು ಕಣ್ಣು ಮುಚ್ಚಿ ಅಲ್ಲಿಂದ ಜಿಗಿದ……….




ಎಷ್ಟು ಹೊತ್ತಾದರೂ ಮಗ ಬರದೇ ಇರೊದನ್ನ ನೋಡಿ ಮೂರ್ತಿಗಳು ಕಾರಿಂದ ಇಳಿದು ಹೊರಗಡೆ ಬಂದ್ರು, ಸುತ್ತಾ ಮುತ್ತಾ ಎಲ್ಲೂ ಕಾಣಿಸ್ಲಿಲ್ಲ, ಹಾಗೆ ಸ್ವಲ್ಪ ದೂರ ಮುಂದೆ ಬಂದವರಿಗೆ ಕಲ್ಲಿನ ದಂಡೆಯ ಮೇಲಿದ್ದ ಹ್ಯಾಂಡಿ ಕ್ಯಾಮ್, ಫೋಟೋ ಕಾಣಿಸ್ತು. ಅವುಗಳನ್ನ ನೋಡ್ತಾ ಇದ್ದ ಹಾಗೆ ಅವರ ಎದೆಬಡಿತ ಜಾಸ್ತಿ ಆಯ್ತು, ಹತ್ತಿರ ಹೋಗಿ ನೋಡುವ ಭಯ, ಅವರಿದ್ದ ಆ ರಾಗಿಕಲ್ಲು ಎಂಥ ಜಾಗ. ಅಲ್ಲಿ ಏನು ಆಗಿರ ಬಹುದು ಅನ್ನುವ ಒಂದು ಊಹೆ ಇದ್ದರೂ, ಅದು ಸತ್ಯವಾಗಿದ್ದರೆ ಹೇಗೆ ಅಗರಗಿಸಿಕೊಳ್ಳೊದು ಅನ್ನುವ ಹಿಂಸೆ.

ಹಾಗಂತ ಸತ್ಯವನ್ನ ಎದುರಿಸದೇ ಇರೊಕಾಗುತ್ತ??? 

ಆ ಹ್ಯಾಂಡಿ ಕ್ಯಾಮ್ ವೀಡಿಯೊ, ಆ ಫೊಟೊ ಅವರಿಗೆ ಅಲ್ಲಿನ ಕಥೆಯನ್ನ ಬಿಚ್ಚಿ ಹೇಳ್ತಾ ಇತ್ತು. ಘಾಟಿಯ ಆ ಮಳೆ, ಚಳಿ ವಸಂತ ಎಲ್ಲವೂ ಸೇರಿ ಅವರ ಹೃದಯವನ್ನ ಹಿಂಡಿದಂತಾಯ್ತು, ನಿಂತ ಜಾಗವೇ ಕುಸಿದ ಹಾಗಯ್ತು.
ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿದರು, ದಟ್ಟವಾದ ಮಂಜಿನಿಂದ ತಕ್ಷಣದ ಯಾವ ಕಾರ್ಯವೂ ಅಲ್ಲಿ ಸಾಧ್ಯವಿರಲಿಲ್ಲ. ಅವತ್ತು ಸಂಜೆ ಮನೆಯವರು, ಮುಂದಿನ ದಿವಸ ಸ್ನೇಹಿತರೂ ಅಂತ ವಿಚಾರಣೆಗಳು ನಡೆದವು, ಎರಡನೇ ದಿವಸ ಮಧ್ಯಾಹ್ನ ಕಳೆದು ಹೋಗಿರೊ ವಸಂತ ನ ಶವ ಹುಡುಕುವ ಕೆಲಸವನ್ನ ಘಾಟಿ ಕೆಳಗಿನ ಕಾಡಿನಲ್ಲಿ ಪೋಲೀಸರು ಶುರು ಹಚ್ಚಿಕೊಂಡರು.


ಆ ಹ್ಯಾಂಡಿ ಕ್ಯಾಮ್ ವೀಡಿಯೊ, ಆ ಫೊಟೊ ಅವರಿಗೆ ಅಲ್ಲಿನ ಕಥೆಯನ್ನ ಬಿಚ್ಚಿ ಹೇಳ್ತಾ ಇತ್ತು. ಘಾಟಿಯ ಆ ಮಳೆ, ಚಳಿ ವಸಂತ ಎಲ್ಲವೂ ಸೇರಿ ಅವರ ಹೃದಯವನ್ನ ಹಿಂಡಿದಂತಾಯ್ತು, ನಿಂತ ಜಾಗವೇ ಕುಸಿದ ಹಾಗಯ್ತು.

ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿದರು, ದಟ್ಟವಾದ ಮಂಜಿನಿಂದ ತಕ್ಷಣದ ಯಾವ ಕಾರ್ಯವೂ ಅಲ್ಲಿ ಸಾಧ್ಯವಿರಲಿಲ್ಲ. ಅವತ್ತು ಸಂಜೆ ಮನೆಯವರು, ಮುಂದಿನ ದಿವಸ ಸ್ನೇಹಿತರೂ ಅಂತ ವಿಚಾರಣೆಗಳು ನಡೆದವು, ಎರಡನೇ ದಿವಸ ಮಧ್ಯಾಹ್ನ ಕಳೆದು ಹೋಗಿರೊ ವಸಂತ ನ ಶವ ಹುಡುಕುವ ಕೆಲಸವನ್ನ ಘಾಟಿ ಕೆಳಗಿನ ಕಾಡಿನಲ್ಲಿ ಪೋಲೀಸರು ಶುರು ಹಚ್ಚಿಕೊಂಡರು.


ಎರಡು ದಿನಗಳ ನಂತರ ಕಾಡಲ್ಲಿ ದೇವತೀರ್ಥ ನದಿಯ ಒಂದು ಬಂಡೆನಡುವೆ ಒಂದು ಹೆಣ ಸಿಕ್ಕಿಹಾಕಿಕೊಂಡಿರುವುದು ಕಾಣಿಸ್ತು. ಮನೆಯವರು ಹೇಳಿದ ಬಟ್ಟೆ ಗುರುತು, ಇನ್ನೊಂದು ಕಾಲಿನಲ್ಲಿದ್ದ ಶೂ ವನ್ನ ಹೊರತುಪಡಿಸಿದ್ರೆ, ಅದು ವಸಂತನ ಹೆಣ ಅಂತ ಹೇಳೋದಕ್ಕೆ ಸಾಧ್ಯಾನೆ ಇರಲಿಲ್ಲ. ಹೆಣವನ್ನ ಮೇಲಕ್ಕೆತ್ತಿ ಕಾಡಿಂದ ಹೊರಗಡೆ ತಂದು ಅಂಬ್ಯುಲೆನ್ಸ್ ನಲ್ಲಿ ಹಾಕ್ಬಿಟ್ಟು ಕಳುಹಿಸಲಾಯಿತು. ಗಿರೀಶ್ ಸೋಮನ ಹಳ್ಳಿ ಪರಮೇಶ್ವರ ಮೂರ್ತಿಗೆ ಫೊನ್ ಮಾಡಿ ವಿಷಯ ತಿಳಿಸಿ ಅಲ್ಲಿಂದ ಹೊರಟರು.

ಜೀಪ್ ನಲ್ಲಿ ಕೂತಿದ್ದ ಗಿರೀಶ್ ಹ್ಯಾಂಡಿ ಕ್ಯಾಮ್ ಕೊನೆಯ ವಿಡಿಯೋವನ್ನ ಮತ್ತೆ ಪ್ಲೇ ಮಾಡಿ ನೋಡಿದ್ರು, ವಸಂತನ ಕೊನೆಯ ಮಾತುಗಳ ಜೊತೆಗೆ ಕಲ್ಲಿನ ದಂಡೆಯ ಮೇಲಿಟ್ಟಿದ್ದ ಕ್ಯಾಮರಾದಲ್ಲಿ ಅವನು ಜಿಗಿಯುವ ದೃಶ್ಯವೂ ರೆಕಾರ್ಡ್ ಆಗಿತ್ತು. ಪಕ್ಕದಲ್ಲಿ 

ಕೂತು ವಿಡಿಯೊ ನೋಡ್ತಾ ಇದ್ದ ಕಾನ್ಸ್ ಸ್ಟೇಬಲ್

ಏನ್ ಅನ್ಯಾಯ ಸರ್, ಅವನನ್ನ ಹೆತ್ತವರಿಗೆ ಬೆಲೆನೆ ಇಲ್ಲಾಂತ ಅಯ್ತಲ್ವ ಸರ್????” ಅಂತ ಮಾತಿಗೆಳೆದ

ಹೌದು,… ದೊಡ್ಡ ಅನ್ಯಾಯ,…. ಇವನ ಸಾವಿಗೆ ಏನ್ ಅರ್ಥ ಇದೆ ಹೇಳಿ, ಸಾಯೊ ವಯಸ್ಸ? ಸಾಯೊ ಕಾರಣಾನ ಅದು? ಇವತ್ತಿನ ಹುಡುಗರಿಗೆ ಆತ್ಮಹತ್ಯೆ ಅನ್ನೋದು ಒಂಥರ ಫ್ಯಾಷನ್ ಆಗ್ಬಿಟ್ಟಿದ್ದೆ ಅನ್ಸುತ್ತೆ. ಅವಳಿಗೆ ಇವನು ಯಾರು ಅಂತಾನೆ ಗೊತ್ತಿಲ್ವಂತೆ, ನಮ್ಮ ಪ್ರೀತಿ ಅಮರವಾಗ್ಲಿ  ಅಂತ ಇವನು ಸಾಯ್ತಾನಂತೆ, ಏನ್ ಮೂರ್ಖತನ ಇದು?.... ನಾವೆಲ್ಲ ಕಾಲೇಜು ಓದೊ ಹೊತ್ತಿಗೆ ಜೀವನ ಅಂದರೆ ಏನು ಅಂತ ಜೀವನದ ಪಾಠವನ್ನ ಜೊತೆಗೆ ಕಲಿತುಕೊಂಡು ಬೆಳಿತಾ ಇದ್ವಿ. ಆದ್ರೆಇವತ್ತು, ಹುಡುಗರಿಗೆ ಬೆಳೆಯೋದು ದೇಹ ಮಾತ್ರ, ಮಾನಸಿಕ ವಾಗಿ, ನೈತಿಕವಾಗಿ ಅವರು ಬೆಳಿತಾನೆ ಇಲ್ಲ, ಒಂದು ಚಿಕ್ಕ ಸಮಸ್ಯೆಗೂ ಸಾಯೋ ನಿರ್ಧಾರ ಹುಡುಕೋ ಮನಸ್ಥಿತಿ ಅಂದ್ರೆ ಏನ್ ಅದರ ಅರ್ಥ?….. ಹಾಗೆ ನೋಡಿದ್ರೆ ನಾವೆಲ್ಲಾ ಯವತ್ತೊ ಆತ್ಮಹತ್ಯೆ ಮಾಡಿ ಕೊಳ್ಬೇಕಿತ್ತು……ನನಿಗೆ ಅನ್ನಿಸೋ ಪ್ರಕಾರ ನಮ್ಮಲ್ಲಿ ಬೆಳಿತಾ ಇರೊ ಸೂಕ್ಷ್ಮ ಮನಸ್ಸುಗಳಿಗೆ ತಂದೆ ತಾಯಿತರ, ಸ್ನೇಹಿತರ ಥರ ಮಾನಸಿಕವಾಗಿ ಸ್ಥೈರ್ಯ ತುಂಬೊ ಕೆಲಸಗಳಾಗ ಬೇಕು, ಓದಿನ ಜೊತೆಗೆ ನಾಲ್ಕು ಜನರ ನಡುವೆ ಬದುಕೊ ಧೈರ್ಯವನ್ನ ತುಂಬ ಬೇಕು, ಹುಟ್ಟಿದ ಮನುಷ್ಯನಿಗೆ ಬದುಕೋ ಹಕ್ಕು ಮಾತ್ರ ಇದೆ, ಸಾಯೋ ಹಕ್ಕು ಇಲ್ಲಾ ಅನ್ನೊದು ಅವರಿಗೆ ತಿಳಿಸಿ ಹೇಳುವವರು ಬೇಕು. ಅಗಲಾದ್ರು ಇಂತಹ ಅವ್ಯವಸ್ಥೆಗಳನ್ನ ನಿಲ್ಲಿಸ ಬಹುದೊ ಏನೊ

ಅಂತ ಹೇಳೊ ಹೊತ್ತಿಗೆ ಅವರ ಜೀಪು ರಾಗಿ ಕಲ್ಲನ್ನ ದಾಟಿತ್ತು.

 ಮಂಜಿನ ಕೊಪ್ಪದ ಕಡೆ ಸಾಗುತಿದ್ದ ಜೀಪು, ಘಾಟಿ ರಸ್ತೆಯ ದಟ್ಟ ಮಂಜಿನ ನಡುವೆ ಮೆಲ್ಲಗೆ  ಮರೆಯಾಯಿತು.


ನೀವೆ ಹೇಳಿ ವಸಂತನ ರೀತಿಯ ಹದಿಹರೆಯದ ಮನಸ್ಸಿನ ಹುಚ್ಚು ನಿರ್ಧಾರಗಳಿಗೆ ಏನನ್ನ ಬೇಕು????



ನಿಮಗೆ ಅನಿಸಿದ್ದನ್ನ ಕಾಮೆಂಟ್ ಮೂಲಕ ತಿಳಿಸ ಬಹುದು